ಬೆಂಗಳೂರು, ಫೆ 11 ( DaijiworldNews/MS): ಕೌಟುಂಬಿಕ ವ್ಯಾಜ್ಯಗಳಲ್ಲಿ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24ರಡಿ ಜೀವನಾಂಶ ಕೋರಿ ಸಲ್ಲಿಸುವ ಅರ್ಜಿ ವಿಲೇವಾರಿಗೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಗರಿಷ್ಠ 6 ತಿಂಗಳ ಕಾಲಮಿತಿ ನಿಗದಿಪಡಿಸಿದೆ.
ವಿಚ್ಛೇದಿತ ಪ್ರಕರಣವೊಂದರಲ್ಲಿ ನ್ಯಾ.ಎಂ ನಾಗಪ್ರಸನ್ನ ಪೀಠ ಈ ತೀರ್ಪು ನೀಡಿದ್ದು ಅರ್ಜಿ ವಿಚಾರಣೆ ವಿಳಂಬದಿಂದ ಉದ್ದೇಶ ಈಡೇರುವುದಿಲ್ಲ. ವಿವಿಧ ಕಾರಣಗಳಿಗೆ ಪತ್ನಿ ತನ್ನ ಪತಿ ಮನೆ ತೊರೆಯುವ ಸಂದರ್ಭ ಎದುರಾಗಲಿದ್ದು, ನಿಗದಿತ ಕಾಲಮಿತಿಯೊಳಗೆ ಅವರಿಗೆ ಪರಿಹಾರ ಸಿಗಬೇಕೆಂದು ಪೀಠ ಹೇಳಿದೆ.
ಜೀವನಾಂಶ ಅರ್ಜಿ ಇತ್ಯರ್ಥಕ್ಕೆ ಕಾಲಮಿತಿ ಹೀಗಿದೆ:
ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾದ ತಕ್ಷಣ ನೋಟಿಸ್ ಜಾರಿಗೊಳಿಸಬೇಕು. ಇ-ಮೇಲ್, ವಾಟ್ಸಾಪ್ ಮೂಲಕ ನೀಡುವ ನೋಟಿಸ್ಗಳೂ ಕಾನೂನು ದೃಷ್ಟಿಯಿಂದ ಮಾನ್ಯತೆ ಹೊಂದಿವೆ. ಹಿಂದೂ ವಿವಾಹ ಕಾಯ್ದೆಯಡಿ ಮಧ್ಯಂತರ ಜೀವನಾಂಶಕ್ಕೆ ಪತ್ನಿ ಸಲ್ಲಿಸುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪತಿಗೆ ಕೋರ್ಟ್ 2 ತಿಂಗಳ ಕಾಲಾವಕಾಶ ನೀಡಬೇಕು. ನಂತರ ವಾದ-ವಿವಾದ ಆಲಿಸಿ 4 ತಿಂಗಳೊಳಗೆ ಆದೇಶ ಹೊರಡಿಸಬೇಕು.
ಒಟ್ಟಾರೆ 6 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ವಿಳಂಬವಾದರೆ ಕಾರಣವನ್ನು ಆದೇಶದಲ್ಲಿ ನಮೂದಿಸಬೇಕು.