ಚೆನ್ನೈ, ಫೆ 11 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಹಿಂದುತ್ವಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಚೆನ್ನೈನ ಥಿಂಕ್ಎಡು ಕಾನ್ಕ್ಲೇವ್ನಲ್ಲಿ ‘ದಿ ಗ್ಲೋಬಲ್ ಹೈ ಟೇಬಲ್: ಕ್ಯಾನ್ ಇಂಡಿಯಾ ಬಿ ಎ ವಿಶ್ವಗುರು’ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಕೊನೆ ತನಕ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ವಿರೋಧಿಸಿದ್ದರು. ಸುಪ್ರೀಂಕೋರ್ಟ್ನಲ್ಲಿ ರಾಮಮಂದಿರ ನಿರ್ಮಾಣ ಕುರಿತಾದ ವಿಚಾರಣೆ ನಡೆಯುತ್ತಿರುವ ವೇಳೆ ತಮ್ಮ ಸ್ನೇಹಿತ ಎಸ್. ಗುರುಮೂರ್ತಿ ಅವರನ್ನು ಅರ್ಜಿ ಸಲ್ಲಿಕೆಗಾಗಿ ಮೋದಿ ಕರೆದೊಯ್ದಿದ್ದರು. ಅಲ್ಲದೆ ಮಂದಿರ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ಹಿಂತಿರುಗಿಸಲು ಅವರು ಬಯಸಿದ್ದರಾದರೂ ಈ ಸಂಬಂಧದ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ತಿರಸ್ಕೃತಗೊಂಡಿತ್ತು ಎಂದಿದ್ದಾರೆ.
ಮೋದಿಯವರೊಂದಿಗೆ ತಾನು ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ. ಆದರೆ ಚೀನಾ ಮತ್ತು ಆರ್ಥಿಕ ನೀತಿಗಳ ವಿಚಾರವಾಗಿ ಪ್ರಧಾನಿ ಕೈಗೊಂಡ ಕ್ರಮಗಳಿಗೆ ನನ್ನ ವಿರೋಧವಿದೆ. ಭಾರತ ವಿಶ್ವಗುರುವಾಗಬೇಕಾದರೆ ಗಡಿ ಸಮಸ್ಯೆಗಳ ಕುರಿತು ಚೀನಾಕ್ಕೆ ಮಿಲಿಟರಿ ಪ್ರತಿಕ್ರಿಯೆ ನೀಡುವ ಅಗತ್ಯ ಬಹಳವಿದೆ. ಸುಮ್ಮನೇ ಭಾರತ ವಿಶ್ವಗುರುವಾಗುವುದಿಲ್ಲ, ಬುದ್ದಿವಂತಿಕೆಯಿಂದ ಮಾತ್ರ ಸಾಧ್ಯವಿದೆ ಎಂದವರು ಪ್ರತಿಪಾದಿಸಿದರು.