ನಾಗ್ಪುರ, ಫೆ 11 (DaijiworldNews/DB): ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದದ ನಡುವೆಯೇ ಭಾರತೀಯರಿಗೂ ಭೂಕಂಪನದ ಭೀತಿ ಎದುರಾಗಿದೆ. ಭಾರತಕ್ಕೂ ಭೂಕಂಪದ ಅಪಾಯವಿದೆ ಎಂಬುದಾಗಿ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಐಐಟಿ ಕಾನ್ಪುರದ ಭೂ ವಿಜ್ಞಾನಿ ಜಾವೇದ್ ಮಲಿಕ್ ಈ ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ಭೂಕಂಪದ ಅಪಾಯವಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಹಾನಿಯ ಪ್ರಮಾಣ ಹೆಚ್ಚಲಿದೆ ಎಂದವರು ಹೇಳಿದ್ದಾರೆ.
ಜಾವೇದ್ ಅವರು ದೇಶದಲ್ಲಿ ಈಗಾಗಲೇ ಘಟಿಸಿರುವ ಭೂಕಂಪನ, ಭೂಮಿಯ ಚಲನವಲನಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪನಕ್ಕೆ ಆ ದೇಶ ನಲುಗಿದೆ. ಅಷ್ಟೇ ತೀವ್ರತೆಯ ಭೂಕಂಪ ಭಾರತದಲ್ಲಿಯೂ ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ.
ದೇಶದ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಬಹುದಾದ ಸಾಧ್ಯತೆ ದಟ್ಟವಾಗಿದೆ. ಹಿಮಾಚಲ ಪ್ರದೇಶ, ಅಂಡಮಾನ್ ನಿಕೋಬಾರ್ ಐಲ್ಯಾಂಡ್ಗಳಲ್ಲಿ ಹಾನಿ ಹೆಚ್ಚಲಿದೆ. ಮುಂದಿನ ಒಂದೆರಡು ದಶಕಗಳಲ್ಲಿ 7.5 ತೀವ್ರತೆಗಿಂತಲೂ ಅಧಿಕ ಪ್ರಮಾಣದಲ್ಲಿ ಭೂಕಂಪ ಸಂಭವಿಸಬಹುದು ಎಂದವರು ಎಚ್ಚರಿಸಿದ್ದಾರೆ.