ಬೆಂಗಳೂರು, ಫೆ 11 (DaijiworldNews/DB): ವಿದೇಶಕ್ಕೆ ಹಾರಲು ತಯಾರಿ ನಡೆಸುತ್ತಿದ್ದ ಶಂಕಿತ ಉಗ್ರನೊಬ್ಬನನ್ನು ಬೆಂಗಳೂರು ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ಆರೀಫ್ ಮಹಮ್ಮದ್ ಬಂಧಿಸಲ್ಪಟ್ಟ ಶಂಕಿತ ಉಗ್ರ. ನಿನ್ನೆಯಷ್ಟೇ ತನ್ನ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದ ಈತ ವಿದೇಶಕ್ಕೆ ಹಾರುವ ತಯಾರಿಯಲ್ಲಿದ್ದ. ಪೊಲೀಸರು ಸ್ವಲ್ಪ ತಡ ಮಾಡಿದ್ದರೂ ಪರಾರಿಯಾಗಿ ಬಿಡುತ್ತಿದ್ದ. ಆದರೆ ಆತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸದ್ಯ ಕೇಂದ್ರ ಬೇಹುಗಾರಿಕೆ ಸಂಸ್ಥೆಯ ಸಹಕಾರದೊಂದಿಗೆ ರಾಜ್ಯ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಶಂಕಿತ ಉಗ್ರ ಆರೀಫ್ ಮಹಮ್ಮದ್ ಬೆಂಗಳೂರಿನ ಥಣಿಸಂದ್ರದ ಮಂಜುನಾಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಾಸಿಸುತ್ತಿದ್ದ. ನಿನ್ನೆ ಆತ ಮಾಲಕರಲ್ಲಿ ಬಿಹಾರಕ್ಕೆ ಹೋಗುವುದಾಗಿ ಹೇಳಿ ಮನೆ ಖಾಲಿ ಮಾಡಿದ್ದ. ಹೀಗಾಗಿ ಮಾಲಕರು 50 ಸಾವಿರ ರೂ. ಅಡ್ವಾನ್ಸ್ ಹಣದ ಪೈಕಿ ಪೇಯಿಂಟ್ ಖರ್ಚು ಕಳೆದ 35 ಸಾವಿರ ರೂ.ಗಳನ್ನು ಆತನಿಗೆ ಹಿಂತಿರುಗಿಸಿದ್ದರು.
ಇನ್ನು ಈತನ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ, ಆತ ನಮಾಜ್ಗೆ ಹೋದಾಗಲೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಒಮ್ಮೆ ಆತನನ್ನು ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಮತ್ತೆ ಆತನನ್ನು ಮಾತನಾಡಿಸುವ ಪ್ರಯತ್ನವನ್ನು ನಾನು ಮಾಡಿರಲಿಲ್ಲ. ಏಕಾಂಗಿಯಾಗಿಯೇ ಇರುತ್ತಿದ್ದ ಎಂದಿದ್ದಾರೆ.