ವಿಜಯಪುರ, ಫೆ 11 (DaijiworldNews/DB): ಪ್ರಜಾಧ್ವನಿ ಕಾರ್ಯಕ್ರಮಕ್ಕೆಂದು ಜಿಲ್ಲೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಾಲಕಿಯೊಬ್ಬಳು ಚುನಾವಣಾ ವೆಚ್ಚಕ್ಕಾಗಿ ತಾನು ಕೂಡಿಟ್ಟ ಹಣವನ್ನು ನೀಡಿದ ಪ್ರಸಂಗ ನಡೆದಿದೆ. ಬಾಲಕಿಯನ್ನು ಪ್ರಶಂಸಿದ ಸಿದ್ದರಾಮಯ್ಯ ಆ ಹಣವನ್ನು ಪುನಃ ಆಕೆಗೆ ಹಿಂತಿರುಗಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶದ ಸಂದರ್ಭ ಅವರನ್ನು ಜಿಯಾ ರಫೀಕ್ ಮಣೂರು (11 ) ಎಂಬ ಬಾಲಕಿ ಭೇಟಿ ಮಾಡಿದ್ದಳು. ಈ ವೇಳೆ ತಾನು ಕೂಡಿಟ್ಟ ಐದು ಸಾವಿರ ರೂ.ಗಳನ್ನು ಸಿದ್ದರಾಮಯ್ಯ ಅವರಿಗೆ ಚುನಾವಣಾ ವೆಚ್ಚಕ್ಕೆಂದು ನೀಡಿದ್ದಾಳೆ.
ಹೆತ್ತವರು ತನಗೆ ನೀಡಿದ ಹಣವನ್ನೇ ಉಳಿತಾಯ ಮಾಡಿದ್ದ ಜಿಯಾ ಐದು ಸಾವಿರ ರೂ.ಗಳನ್ನು ಸಂಗ್ರಹಿಸಿದ್ದಾಳೆ. ಅದೇ ಹಣವನ್ನು ಆಕೆ ಸಿದ್ದರಾಮಯ್ಯನವರಿಗೆ ದೇಣಿಗೆಯಾಗಿ ನೀಡಿದ್ದಾಳೆ. ಇನ್ನು ಬಾಲಕಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆಕೆ ನೀಡಿದ ಹಣವನ್ನು ಪುನಃ ಆಕೆಗೇ ನೀಡಿ, ನಿನ್ನ ವಿದ್ಯಾಭ್ಯಾಸಕ್ಕಾಗಿ ಈ ಹಣವನ್ನು ವಿನಿಯೋಗಿಸು ಎಂದು ಸಲಹೆ ನೀಡಿ ಕಳುಹಿಸಿದರು.