ಜಾರ್ಖಂಡ್, ಫೆ 11 (DaijiworldNews/DB): ವಾಕ್ ಸ್ವಾತಂತ್ರ್ಯವೆಂಬುದೇ ದೇಶದಲ್ಲಿ ಇಲ್ಲದಂತಾಗಿದೆ. ಸಂಸತ್ತಿನ ಒಳಗೂ, ಹೊರಗೂ ಧೈರ್ಯವಾಗಿ ಮಾತನಾಡಲು ಅವಕಾಶವಿಲ್ಲದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪಕ್ಷದ 60 ದಿನಗಳ 'ಹಾಥ್ ಸೆ ಹಾಥ್ ಜೋಡೋ' ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಸಂಸತ್ತಿನ ಒಳಗೆಯಾಗಲೀ, ಹೊರಗೆಯಾಗಲೀ ವಾಕ್ ಸ್ವಾತಂತ್ರ್ಯವೇ ಇಲ್ಲದಾಗಿದೆ. ಧೈರ್ಯದಿಂದ ಮಾತನಾಡಿದರೆ ಅವರನ್ನು ಜೈಲಿಗೆ ಕಳುಹಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಂತ್ತಿನಲ್ಲಿ ಮಾಡಿದ ಭಾಷಣದ ಭಾಗಗಳನ್ನೂ ತೆಗೆದು ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಣದುಬ್ಬರ ತಡೆಯುವ ಭರವಸೆಯೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಆನಂತರ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಹೋಗುತ್ತಿರುವುದು ದುರದೃಷ್ಟ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಬಡತನ ಹೆಚ್ಚುತ್ತಲೇ ಹೋಗುತ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಯಾವಾಗಲೂ ದೇಶದ ಮೂಲ ಸೌಕರ್ಯಗಳ ಅಭಿವೃದ್ದಿಗಾಗಿ ಹೋರಾಡುತ್ತಿದೆ. ಅಧಿಕಾರ ಇದ್ದಾಗ ಪ್ರಾಮಾಣಿಕವಾಗಿ ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದೆ ಎಂದರು.