ರಾಜಸ್ಥಾನ, ಫೆ 11 (DaijiworldNews/DB): ಮಹಿಳೆಯೊಬ್ಬರು ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಗೆದ್ದಲು ಹುಳುಗಳು ತಿಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಉದಯಪುರ ನಗರದ ಕಲಾಜಿ ಗೋರಾಜಿ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಘಟನೆ ನಡೆದಿದೆ. ಸುನೀತಾ ಮೆಹ್ತಾ ಎಂಬವರು ಬ್ಯಾಂಕ್ ಲಾಕರ್ ಸಂಖ್ಯೆ 265ರಲ್ಲಿ 2,15,000 ರೂ. ಮೌಲ್ಯದ ನೋಟುಗಳು ಹಾಗೂ ಆಸ್ತಿ ದಾಖಲೆಗಳನ್ನು ಇಟ್ಟಿದ್ದರು. ಎರಡು ಲಕ್ಷ ರೂ.ಗಳನ್ನು ಬಟ್ಟೆ ಚೀಲದಲ್ಲಿ ಹಾಗೂ 15 ಸಾವಿರ ರೂ.ಗಳನ್ನು ಹೊರ ಭಾಗದಲ್ಲಿ ಇಟ್ಟಿದ್ದರು. ಹಣವನ್ನು ಹಿಂಪಡೆಯಲೆಂದು ಬ್ಯಾಂಕ್ಗೆ ಹೋದಾಗ ತಮ್ಮ ಹಣವನ್ನು ಗೆದ್ದಲು ಹುಳುಗಳು ತಿಂದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ವಿಷಯವನ್ನು ಬ್ಯಾಂಕ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ.
ಬ್ಯಾಂಕಿನಲ್ಲಿ ಲಾಕರ್ನ ಹೊರಭಾಗದಲ್ಲಿಟ್ಟ 15 ಸಾವಿರ ರೂ.ಗಳನ್ನು ಮಾತ್ರ ಗೆದ್ದಲು ತಿಂದಿರುವುದು ಅವರ ಗಮನಕ್ಕೆ ಬಂದಿತ್ತು. ಹೀಗಾಗಿ ಆ ಹಣವನ್ನು ಬ್ಯಾಂಕ್ನಿಂದ ಬದಲಾಯಿಸಿ ಪಡೆದಿದ್ದರು. ಆದರೆ ಮನೆಗೆ ಹೋಗಿ ಬಟ್ಟೆ ಚೀಲದಲ್ಲಿದ್ದ ಹಣವನ್ನು ತೆರೆದು ನೋಡಿದಾಗ ಅದನ್ನೂ ಗೆದ್ದಲು ಹುಳುಗಳು ತಿಂದಿರುವುದು ಗೊತ್ತಾಗಿದೆ.
ಇನ್ನು ಬ್ಯಾಂಕ್ ಸಿಬಂದಿ ಲಾಕರ್ ಸುತ್ತ ಗೆದ್ದಲಿನ ಮದ್ದು ಸಿಂಪಡಿಸಿದ್ದಾರೆ. ಬ್ಯಾಂಕ್ ನೌಕರರ ನಿರ್ಲಕ್ಷ್ಯದ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.