ಚೆನ್ನೈ, ಫೆ 12 (DaijiworldNews/DB): ನಮ್ಮ ರಾಜ್ಯದ ರಸ್ತೆ ತೀರಾ ಕೆಟ್ಟದಾಗಿದೆ. ಇದರಿಂದಾಗಿ ನಾನು ಕಾರು ಬದಲಿಗೆ ರೈಲಿನಲ್ಲೇ ಪ್ರಯಾಣ ಮಾಡಬೇಕಾದ ಅನಿವಾರ್ಯ ಬಂದೊದಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ಚೆನ್ನೈ ಮತ್ತು ರಾಣಿಪೇಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಗಡ್ಕರಿಗೆ ಪತ್ರ ಬರೆದಿರುವ ಅವರು, ಈ ರಸ್ತೆಯು ಚೆನ್ನೈ ಮತ್ತು ಇಲ್ಲಿನ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು, ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್ಗಳನ್ನು ಸಂಪರ್ಕಿಸುತ್ತದೆ ಎಂದಿದ್ದಾರೆ.
ರಸ್ತೆ ತೀರಾ ನಾದುರಸ್ತಿಯಲ್ಲಿರುವುದರಿಂದ ಸಂಚಾರ ಕಷ್ಟಸಾಧ್ಯವಾಗುತ್ತಿದೆ. ಇದರಿಂದಾಗಿ ನಾನು ಇತ್ತೀಚೆಗೆ ಕೆಲವು ಜಿಲ್ಲೆಗಳ ಭೇಟಿಗೆ ಕಾರು ಬದಲಾಗಿ ರೈಲಿನ ಸಂಚಾರವನ್ನೇ ಮಾಡಬೇಕಾಗಿ ಬಂತು. ರಸ್ತೆ ವಿಷಯವಾಗಿ ಈ ಹಿಂದೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಆದರೆ ಆಗ ಕೇಂದ್ರ ಸಚಿವರು ಬದ್ದತೆ ಇಲ್ಲದ ಸಾಮಾನ್ಯ ಉತ್ತರ ನೀಡಿದ್ದರು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.