ರಾಧಾಕಿಶೋರ್ಪುರ್ (ತ್ರಿಪುರಾ), ಫೆ 12 (DaijiworldNews/DB): ತ್ರಿಪುರಾದ ಬುಡಕಟ್ಟು ಪ್ರದೇಶದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಲಗುಂದುವುದು ನಿಶ್ಚಿತ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಳಿದ್ದಾರೆ.
ರಾಧಾಕಿಶೋರ್ಪುರ್ನಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಐಪಿಎಫ್ಟಿ ಮೈತ್ರಿಕೂಟವು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅವರು ಗೆಲುವು ಸಾಧಿಸಿದ 36 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳು ಬುಡಕಟ್ಟು ಪ್ರದೇಶಗಳಾಗಿದ್ದವು. ಆದರೆ ಈ ಬಾರಿ ಬುಡಕಟ್ಟು ಪ್ರದೇಶಗಳಲ್ಲಿ ಪ್ರಬಲವಾಗಿರುವ ಟಿಪ್ರಮೋಥಾವು ಚುನಾವಣೆಗೆ ಇಳಿದಿರುವುದರಿಂದ ಬಿಜೆಪಿಯ ಬಲ ಕುಸಿಯುವುದು ನಿಶ್ಚಿತ ಎಂದರು.
ಟಿಪ್ರಮೋಥಾ ಕಣಕ್ಕಿಳಿಯುವುದರಿಂದ ಬುಡಕಟ್ಟು ಜನರ ಮತಗಳು ಬಿಜೆಪಿ ಪಾಲಾಗುವುದು ಸಾಧ್ಯವಿಲ್ಲ. ಇದು ಸಿಪಿಐ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದವರು ಹೇಳಿದರು.
2013ರಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಕ್ರಮವಾಗಿ ಶೇ. 37 ಹಾಗೂ ಶೇ. 48ರಷ್ಟು ಮತ ಗಳಿಸಿದ್ದವು. ಈ ಬಾರಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವುದರಿಂದ ಬಿಜೆಪಿಯ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಸುಲಭವಾಗಲಿದೆ ಎಂದರು.