ಬೆಂಗಳೂರು, ಫೆ 12 (DaijiworldNews/DB): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮೀಪದ ಹಳಿ ಮೇಲೆ ಆದಾಯ ತೆರಿಗೆ ಇನ್ಸ್ಪೆಕ್ಟರ್ವೊಬ್ಬರ ಮೃತದೇಹ ಪತ್ತೆಯಾಗಿದೆ.
ಉತ್ತರ ಪ್ರದೇಶ ಮೂಲದ ದೇವೇಂದ್ರ ದುಬೆ (40) ಮೃತಪಟ್ಟವರು. ಪತ್ನಿ, ಇಬ್ಬರು ಮಕ್ಕಳೊಂದಿಗೆ ಯಶವಂತಪುರ ಎಚ್. ಗುರುಮೂರ್ತಿ ಕಾಲನಿಯಲ್ಲಿ ವಾಸವಾಗಿದ್ದ ದೇವೇಂದ್ರ ಇತ್ತೀಚೆಗೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಬಳಿಕ ಜನವರಿ 20ರಂದು ಮನೆಯಿಂದ ಹೊರ ಹೋದವರು ವಾಪಾಸ್ ಬಂದಿರಲಿಲ್ಲ. ಹೀಗಾಗಿ ಮನೆಯವರು ಅವರಿಗಾಗಿ ಹುಡುಕಾಟ ನಡೆಸಿದ್ದು, ಪತ್ತೆಯಾಗದ ಕಾರಣ ಜನವರಿ 23ರಂದು ದೇವೇಂದ್ರ ಅವರ ಪತ್ನಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದೇ ದಿನ ಸಂಜೆ ಕೆಎಸ್ಆರ್ ರೈಲು ನಿಲ್ದಾಣದ ಬಳಿಯ ಹಳಿ ಮೇಲೆ ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ದೇವೇಂದ್ರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಕುಟುಂಬಿಕರು ದೇವೇಂದ್ರ ಅವರದೇ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾರೆ.
ಡೆತ್ನೋಟ್ ಕಳಿಸಿದ್ದರು
ಇನ್ನು ದೇವೇಂದ್ರ ಅವರು ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪತ್ನಿ ಜೊತೆ ಗಲಾಟೆ ಮಾಡಿದ್ದ ಜನವರಿ 20ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಪತ್ನಿ ವಾಟ್ಸಾಪ್ಗೆ ಸಂದೇಶ ಕಳುಹಿಸಿದ್ದಾರೆ. ನಾನು ಬದುಕುವುದಿಲ್ಲ, ಸಾಯುತ್ತೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಮೃತದೇಹವನ್ನು ಮಕ್ಕಳಿಗೆ ತೋರಿಸಬೇಡಿ ಎಂದು ಪತ್ನಿಗೆ ವಾಟ್ಸಾಪ್ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಘಟನೆಯಲ್ಲಿ ಕೆಲವೊಂದು ಅನುಮಾನಗಳಿರುವುದರಿಂದ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821