ಶ್ರೀನಗರ, ಫೆ 12 (DaijiworldNews/DB): ಜಮ್ಮು ಮತ್ತು ಕಾಶ್ಮೀರವು ಉತ್ತಮ ವ್ಯಾಪಾರ, ಉದ್ಯೋಗ, ಪ್ರೀತಿಯನ್ನು ಬಯಸುತ್ತದೆ. ಆದರೆ ಬಿಜೆಪಿಯು ಬುಲ್ಡೋಜರ್ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಕ್ರಮ ತೆರವು ವಿರೋಧಿಸಿ ನಡೆಯುತ್ತಿರುವ ಅಭಿಯಾನದ ಕುರಿತು ಬಿಜೆಪಿ ವಿರುದ್ದ ಭಾನುವಾರ ಟ್ವೀಟ್ ಮಾಡಿ ಹರಿಹಾಯ್ದಿರುವ ಅವರು, ಜಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿತ್ತು, ಆದರೆ ಅವರು ಏನು ಪಡೆದರು? ಬಿಜೆಪಿಯ ಬುಲ್ಡೋಜರ್! ಅಲ್ಲಿನ ಜನರು ಹಲವು ದಶಕಗಳಿಂದ ಕಷ್ಟಪಟ್ಟು ನೀರಾವರಿ ಮಾಡಿದ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಆದರೆ ನಾವೆಂದೂ ಜನರನ್ನು ವಿಭಜಿಸುವುದಿಲ್ಲ. ಶಾಂತಿಯಿಂದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಇನ್ನು ಅತಿಕ್ರಮ ತೆರವು ಕಾರ್ಯಾಚರಣೆ ಬಗೆಗಿನ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳು ಈ ಅತಿಕ್ರಮ ತೆರವು ವಿರುದ್ಧ ತಮ್ಮ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿವೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ ಶೇ.100 ರಷ್ಟು ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಕಮಿಷನರ್ ಸೆಕ್ರೆಟರಿ ವಿಜಯ್ ಕುಮಾರ್ ಬಿಧುರಿ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಬಳಿಕ ಈವರೆಗೆ ಹತ್ತು ಲಕ್ಷಕ್ಕೂ ಅಧಿಕ ಭೂಮಿ ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.