ದಿಯೋಘರ್, ಫೆ 12 (DaijiworldNews/DB): ಅಪರಿಚಿತರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಸಿಬಂದಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.
ಸಾಹಿಬ್ಗಂಜ್ ಜಿಲ್ಲೆಯ ನಿವಾಸಿಗಳಾದ ರವಿಕುಮಾರ್ ಮಿಶ್ರಾ ಮತ್ತು ಸಂತೋಷ್ ಯಾದವ್ ಮೃತಪಟ್ಟವರು. ಮಧ್ಯರಾತ್ರಿ ಸುಮಾರು12.30ರ ವೇಳೆಗೆ ರಾಂಚಿಯಿಂದ 250 ಕಿ. ಮೀ ದೂರದಲ್ಲಿರುವ ದಿಯೋಘರ್ ಪಟ್ಟಣದ ಶ್ಯಾಮ್ಗಂಜ್ ರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮೀನು ವ್ಯಾಪಾರಿಯೊಬ್ಬನ ಮನೆ ಮೇಲೆ ಅಪರಿಚಿತರು ಕೆಲ ದಿನಗಳ ಹಿಂದೆ ದಾಳಿ ನಡೆಸಿದ್ದರು. ಈ ಘಟನೆಯಿಂದಾಗಿ ಮೀನು ವ್ಯಾಪಾರಿಯು ಭದ್ರತೆ ಕೋರಿದ್ದ. ಇದೀಗ ಆತನ ಮನೆ ಮೇಲೆ ಅಪರಿಚಿತರಿಂದ ಮತ್ತೆ ದಾಳಿ ನಡೆದಿದ್ದು, ಈ ವೇಳೆ ಮೀನು ವ್ಯಾಪಾರಿಯ ಮನೆಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಸಿಬಂದಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾಶ್ ಚಂದ್ರ ಜಾಟ್ ಹೇಳಿದ್ದಾರೆ.
ಅಪರಿಚತರು ಗುಂಡಿನ ದಾಳಿ ನಡೆಸಿದಾಗ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಆದರೆ ಅವರು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇನ್ನು ಮೀನು ವ್ಯಾಪಾರಿಯ ಮನೆಯಲ್ಲಿದ್ದ ಮೂವರು ಗಾಯಗೊಂಡಿದ್ದು, ಅವರು ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.