ಮುಂಬೈ, ಫೆ 12 (DaijiworldNews/DB): ರಾಜ್ಯಪಾಲ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದು ಮಹಾರಾಷ್ಟ್ರಕ್ಕೆ ಸಿಕ್ಕ ಅತಿ ದೊಡ್ಡ ಗೆಲುವು ಎಂದು ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ರಾಜ್ಯಪಾಲರ ರಾಜೀನಾಮೆ ಬೆನ್ನಲ್ಲೇ ಭಾನುವಾರ ಟ್ವೀಟ್ ಮಾಡಿರುವ ಅವರು, ರಾಜ್ಯಪಾಲರು ಮಹಾರಾಷ್ಟ್ರ ವಿರೋಧಿಯಾಗಿದ್ದರು. ಕೊನೆಗೂ ಅವರ ರಾಜೀನಾಮೆ ಅಂಗೀಕೃತಗೊಂಡಿರುವುದು ಮಹಾರಾಷ್ಟ್ರಕ್ಕೆ ಸಿಕ್ಕ ಗೆಲುವುದು ಎಂದಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ನಮ್ಮ ಸಂವಿಧಾನ, ವಿಧಾನಸಭೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ಅವರು ಅವಮಾನಿಸುತ್ತಲೇ ಬಂದಿದ್ದರು. ಅಂತಹವರನ್ನು ರಾಜ್ಯದ ರಾಜ್ಯಪಾಲ ಎಂದು ಒಪ್ಪಿಕೊಳ್ಳುವುದು ಅಸಾಧ್ಯ. ಇದೀಗ ಅವರ ನಿರ್ಗಮನ ಸಂತಸ ತಂದಿದೆ ಎಂದು ಆದಿತ್ಯ ಠಾಕ್ರೆ ತಿಳಿಸಿದ್ದಾರೆ.
ಕೊಶ್ಯಾರಿಯವರು ತಮ್ಮ ಹೇಳಿಕೆಗಳಿಂದಾಗಿ ಹಲವಾರು ಬಾರಿ ವಿವಾದಕ್ಕೆ ಕಾರಣರಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರನ್ನು ಹಳೆ ಕಾಲದ ಐಕಾನ್ ಎಂದಿದ್ದರಲ್ಲದೆ, ನಿತಿನ್ ಗಡ್ಕರಿ ಈಗಿನ ಕಾಲದ ಐಕಾನ್ ಎಂದಿದ್ದರು. ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಶಿಫಾರಸ್ಸು ನೀಡಿದರೂ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ 12 ಸ್ಥಾನ ಭರ್ತಿಗೆ ಸಹಿ ಮಾಡದೇ ವಿವಾದ ಸೃಷ್ಟಿಸಿಕೊಂಡಿದ್ದರು. ಬಿಜೆಪಿ-ಶಿವಸೇನೆ ನಡುವೆ ಬಿರುಕು ಉಂಟಾಗಿದ್ದಾಗ 2019ರಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಎನ್ಸಿಪಿಯ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಬೆಳ್ಳಂಬೆಳಗ್ಗೆಯೇ ಪ್ರಮಾಣ ವಚನ ಬೋಧಿಸಿದ್ದರು. ಇದರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.