ನವದೆಹಲಿ, ಫೆ 12 (DaijiworldNews/DB): ಮೋದಿಗಾಗಿ ಯಾರು ಕೆಲಸ ಮಾಡುತ್ತಾರೋ ಅವರನ್ನು ಬಿಜೆಪಿ ರಾಜ್ಯಪಾಲರನ್ನಾಗಿ ಮಾಡುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅಯೋಧ್ಯ ವಿವಾದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್ನ ಪೀಠದಲ್ಲಿ ಒಬ್ಬರಾಗಿದ್ದ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯಪಾಲರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದ ಬೆನ್ನಲ್ಲೇ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಠಾಗೋರ್, ಮೋದಿ ಅದಾನಿಗಾಗಿ ಕೆಲಸ ಮಾಡುತ್ತಾರೆ. ಮೋದಿಗಾಗಿ ಕೆಲಸ ಮಾಡಿದವರು ರಾಜ್ಯಪಾಲರಾಗುತ್ತಾರೆ. ಜನರಿಗಾಗಿ ಕೆಲಸ ಮಾಡುವವರು ಯಾರು ಎಂಬುದೇ ಸದ್ಯದ ಪ್ರಶ್ನೆ. ಭಾರತ್ ಮಾತಾ ಕಿ ಜೈ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ಅವರು ಅರುಣ್ ಜೇಟ್ಲಿಯವರ ಹಳೆಯ ವೀಡಿಯೋ ತುಣುಕೊಂದನ್ನು ಟ್ವೀಟ್ ಮಾಡಿ ಪರೋಕ್ಷವಾಗಿ ಸರ್ಕಾರಕ್ಕೆ ಕುಟುಕಿದ್ದಾರೆ. ನಿವೃತ್ತಿ ಪೂರ್ವ ತೀರ್ಪುಗಳು ನಿವೃತ್ತಿ ಬಳಿಕದ ಉದ್ಯೊಗಗಳಿಂದ ಪ್ರಭಾವಿತಗೊಂಡಿರುತ್ತವೆ ಎಂದು ಅರುಣ್ ಜೇಟ್ಲಿಯವರು ಹೇಳಿರುವ ವೀಡಿಯೋವನ್ನು ಹಂಚಿಕೊಂಡಿರುವ ಜೈರಾಮ್ ರಮೇಶ್, ಈ ನೇಮಕಕ್ಕೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ಪುರಾವೆ ದೊರೆತಿದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ನ ಆರೋಪಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ , ಕಾಂಗ್ರೆಸ್-ಲೆಫ್ಟ್ ಇಕೋ ಸಿಸ್ಟಮ್ನಲ್ಲಿ ನೇಮಕಾತಿಗಳಿಗೆ ವಿರೋಧವೊಡ್ಡುವುದು ಸಾಮಾನ್ಯವಾಗಿದೆ ಎಂದಿದ್ದಾರೆ.
ಶ್ರೀ ರಾಮ ಜನ್ಮ ಭೂಮಿ ತೀರ್ಪು ನೀಡಿದ್ದ ನಿವೃತ್ತ ಜಡ್ಜ್ ಎಸ್. ಅಬ್ದುಲ್ ನಜೀರ್ ನೇಮಕಕ್ಕೆ ಕೊಂಕು ತೆಗೆದಿರುವ ಕಾಂಗ್ರೆಸ್ನ DO AS I SAY NOT AS I DO ಬ್ರಿಗೇಡ್ ಕಾರ್ಯೋನ್ಮುಖಗೊಂಡಿದೆ ಎಂದವರು ಕಿಡಿ ಕಾರಿದ್ದಾರೆ.