ಶ್ರೀನಗರ, ಫೆ 12 (DaijiworldNews/DB): ವೈದ್ಯರು ವಾಟ್ಸಾಪ್ ಕರೆ ಮೂಲಕ ಹೆರಿಗೆಯ ಪ್ರಕ್ರಿಯೆ ಸೂಚಿಸಿ ಆರೋಗ್ಯವಂತ ಮಗುವಿಗೆ ಮಹಿಳೆ ಜನ್ಮ ನೀಡುವಲ್ಲಿ ಸಹಾಯ ಮಾಡಿದ್ದಾರೆ. ಜಮ್ಮುವಿನಲ್ಲಿ ಈ ವಿಶೇಷ ಪ್ರಸಂಗ ಘಟಿಸಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಜಮ್ಮು ಮತ್ತು ಕಾಶ್ಮೀರದ ಕೆರಾನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ ಹಿಮಪಾತದಿಂದಾಗಿ ಆಕೆಯನ್ನು ಹೆರಿಗೆ ಸೌಲಭ್ಯವುಳ್ಳ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯಕೀಯ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಕೆರಾನ್ ಪಿಎಚ್ಸಿಯ ವೈದ್ಯಕೀಯ ಸಿಬಂದಿಯು ತಜ್ಞ ವೈದ್ಯರೊಂದಿಗೆ ವಾಟ್ಸಾಪ್ ಕಾಲ್ನಲ್ಲಿಯೇ ಮಾತನಾಡಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
ಕ್ರಾಲ್ಪೋರಾ ಉಪ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಪರ್ವೈಜ್ ಅವರು ಕೆರಾನ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅರ್ಷದ್ ಸೋಫಿ ಮತ್ತು ಅವರ ಅರೆ ವೈದ್ಯಕೀಯ ಸಿಬ್ಬಂದಿಗೆ ಹೆರಿಗೆ ಪ್ರಕ್ರಿಯೆ ಕುರಿತು ವಾಟ್ಸಾಪ್ ಕಾಲ್ನಲ್ಲಿಯೇ ತಿಳಿಸಿದರು. ತಜ್ಞ ವೈದ್ಯರ ಮಾರ್ಗದರ್ಶನದಂತೆ ವೈದ್ಯಕೀಯ ಸಿಬಂದಿ ಹೆರಿಗೆ ಮಾಡಿಸಿದ್ದು, ಆರು ಗಂಟೆಗಳ ಬಳಿಕ ಹೆರಿಗೆ ಪ್ರಕ್ರಿಯೆ ಪೂರ್ಣಗೊಂಡಿತ್ತು. ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಅಲ್ಲಿನ ವೈದ್ಯ ಡಾ. ಶಫಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.