ರಾಜಸ್ಥಾನ, ಫೆ 12 (DaijiworldNews/DB): ಕೊನೆ ಉಸಿರಿರುವವರೆಗೂ ರಾಜಕೀಯದಲ್ಲಿರುತ್ತೇನೆ. ಈ ರಂಗದಿಂದ ನಿವೃತ್ತಿ ಪಡೆಯುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪರ ಕೆಲಸ ಮಾಡುವುದನ್ನು ಕೊನೆ ಉಸಿರಿರುವರೆಗೂ ಮುಂದುವರಿಸುತ್ತೇನೆ. ನಿವೃತ್ತಿಯ ಮಾತೇ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇನೆ ಎಂದರು.
ನನಗೆ 20 ವರ್ಷ ವಯಸ್ಸಾಗಿದ್ದಾಗ ನಾನು ರಾಜಕೀಯ ರಂಗಕ್ಕೆ ಬಂದಿದ್ದೇನೆ. ಎನ್ಎಸ್ಯುಐಯಿಂದ ಸಕ್ರಿಯ ರಾಜಕಾರಣಕ್ಕೆ ಬಂದೆ. ಇದೀಗ ರಾಜಕೀಯದಲ್ಲಿ ಐದು ದಶಕಗಳ ಸುದೀರ್ಘ ಅನುಭವ ಹೊಂದಿದ್ದೇನೆ. ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿಯೂ ಅನುಭವಿಯಾಗಿದ್ದೇನೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಪ್ರಸ್ತುತ ಸೋನಿಯಾ ಗಾಂಧಿ ಎಲ್ಲರೂ ನನಗೆ ಕಾಂಗ್ರೆಸ್ನಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.