ಹಾಸನ, ಫೆ. 12 (DaijiworldNews/SM): ಮುಂಬರುವ ವಿಧಾನಸಭೆ (Karnataka Assembly Elections 2023) ಟಿಕೆಟ್ ವಿಚಾರವಾಗಿ ಹಾಸನದಲ್ಲಿ (Hassan) ದಳಪತಿಗಳಲ್ಲಿ ತಳಮಳ ಶುರುವಾಗಿದೆ. ಹಾಸನಕ್ಕಾಗಿ ಕುಟುಂಬದಲ್ಲೇ ಮುಸುಕಿನ ಗುದ್ದಾಟ, .ಅರಲಗೂಡಿನಲ್ಲಿ ಅತಂತ್ರ, ಅರಸೀಕೆರೆಯಲ್ಲಿ ಸೆಡ್ಡು. ಹೀಗೆ ಮನೆಯೊಂದು ಮೂರು ಬಾಗಿಲು ಎನ್ನುವಂತೆ ಹಾಸನ ಜೆಡಿಎಸ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಇಂದು(ಫೆಬ್ರವರಿ 12) ಹಾಸನ ಜಿಲ್ಲಾ ಪ್ರವಾಸ ಕೈಗೊಂಡು ಧೂಳೆಬ್ಬಿಸಿದರು. ಅರಸೀಕೆರೆಯಲ್ಲಿ ಶಿವಲಿಂಗೇಗೌಡ ವಿರುದ್ಧ ಪರ್ಯಾಯ ಅಭ್ಯರ್ಥಿಯನ್ನು ಘೋಷಿಸಿದರು. ಇನ್ನು ಹಾಸನ ಟಿಕೆಟ್ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಟಿಕೆಟ್ ಸಮರಕ್ಕೆ ಪೂರ್ಣ ವಿರಾಮ ಇಡುತ್ತಾರೆ ಎಂದು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಭಾವಿಸಿದ್ದರು. ಆದ್ರೆ, ಹೆಚ್ಡಿಕೆ ಅದ್ಯಾವುದನ್ನು ಮಾಡದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಸನ ಟಿಕೆಟ್ ನಿಗೂಢವಾಗಿಟ್ಟಿದ್ದಾರೆ.
ಹಾಸನ ಟಿಕೆಟ್ಗಾಗಿ ಭವಾನಿ ರೇವಣ್ಣ ಅವರು ಕುಮಾರಸ್ವಾಮಿ ಮಾತಿಗೆ ಕ್ಯಾರೇ ಎನ್ನದೇ ಕ್ಷೇತ್ರದಲ್ಲಿ ಭರ್ಜರಿ ಓಡಾಡಿದರು. ಇನ್ನು ಭವಾನಿ ರೇವಣ್ಣ ಅವರ ಪುತ್ರ ಸೂರಜ್ ಸಹ ತಮ್ಮ ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ತೊಡೆತಟ್ಟಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ವಿರೋಧಿಗಳು ಸಹ ಮುಸಿಮುಸಿ ನಗುವಂತಾಗಿತ್ತು. ಇದು ದೊಡ್ಡಗೌಡ್ರ ವರ್ಚಸ್ಸಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಇತ್ತು. ಇದರಿಂದ ಎಚ್ಚೆತ್ತ ದೇವೇಗೌಡ, ರೇವಣ್ಣ ಅವರನ್ನು ಮನೆಗೆ ಕರೆಯಿಸಿಕೊಂಡು ಪಾಠ ಮಾಡಿದ್ದರು. ಬಳಿಕ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ನಡುವಿನ ಏಟು ಎದುರೇಟಿಗೆ ಬ್ರೇಕ್ ಬಿತ್ತು. ಆದ್ರೆ, ಇಂದು ತಾಯಿ ಮಗ(ಭವಾನಿ ರೇವಣ್ಣ ಹಾಗೂ ಸೂರಜ್) ಕುಮಾರಸ್ವಾಮಿ ಜೊತೆ ಓಡಾಡಿಕೊಂಡಿದ್ದರು.