ರಾಯಚೂರು, ಫೆ 13 (DaijiworldNews/HR): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಸತ್ಯ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 130 ಸ್ಥಾನಗಳು, ಗರಿಷ್ಠ 150 ಸ್ಥಾನಗಳನ್ನು ಗೆಲ್ಲುತ್ತೇವೆ. 15 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ನನ್ನ ಕಂಡರೇ ಭಯ. ನಾನು ಎಲ್ಲಿ ನಿಂತರೂ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ. ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲುತ್ತೇನೆ, ವರುಣದಿಂದ ನಿಂತರೂ ಗೆಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ಗೆ ಮುಸ್ಲಿಮರು ಮತ ಹಾಕಬೇಡಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಚ್.ಡಿ. ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರೇ ಮಿಸ್ಟರ್ ಕುಮಾರಸ್ವಾಮಿಯಾಗಿದ್ದಾರೆ. ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದು ಯಾರು?, ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವುದು ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.