ಬೆಂಗಳೂರು, ಫೆ 13 (DaijiworldNews/HR): ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕವಾಗಿದ್ದು, ರಕ್ಷಣಾ ವಲಯದ ಶೇ.65ರಷ್ಟು ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಚಾಲನೆಗೊಂಡ ಏರೋ ಇಂಡಿಯಾ ಶೋ 2023 ಕಾರ್ಯಕ್ರಮದಲ್ಲಿ ಪ್ರಧಾನಿಗಳೊಂದಿಗೆ ಪಾಲ್ಗೊಂಡು ಮಾತನಾಡಿದ ಅವರು, ಈ ಕಾರ್ಯಸಾಧನೆಗೆ ಪ್ರಧಾನಿಗಳ ಆಶಯದಂತೆ ಕರ್ನಾಟಕ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ ಎಂದರು.
ಇನ್ನು ಏರೋ ಇಂಡಿಯಾ ಶೋ 14ನೇ ಆವೃತ್ತಿಯು ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷ ಆವೃತ್ತಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಏರ್ ಶೋ ಆಗಿದೆ. ರಕ್ಷಣಾ ವಲಯ ಹಾಗೂ ಏರ್ ಶೋ ಪ್ರದರ್ಶನದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ಜರುಗಿತು. ಈ ಬಾರಿ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.