ಬೆಂಗಳೂರು, ಫೆ 13 ( DaijiworldNews/MS): ಏರೋ ಇಂಡಿಯಾವನ್ನು ಒಂದು ಸಮಯದಲ್ಲಿ ಕೇವಲ ಪ್ರದರ್ಶನಕ್ಕೆ ಸೀಮಿತ ಎಂದು ಭಾವಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ದೃಷ್ಟಿಕೋನ ಬದಲಾಗಿದೆ. ನವಭಾರತದ ನವಮಾರ್ಗವನ್ನು ಏರೋ ಇಂಡಿಯಾ ಪ್ರತಿಫಲಿಸುತ್ತದೆ. ಇವತ್ತು ಇದು ಕೇವಲ ಶೋ ಮಾತ್ರವಲ್ಲ ಭಾರತದ ಶಕ್ತಿಯೂ ಆಗಿದೆ. ಭಾರತದ ರಕ್ಷಣಾ ಉದ್ಯಮದ ಬೆಳವಣಿಗೆ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕವಾಗಿದೆ ಎಂದು ಸೋಮವಾರ ಏರೋ ಇಂಡಿಯಾ ಶೋಗೆ ಚಾಲನೆ ನೀಡಿದ ಬಳಿಕ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು, ರಾಷ್ಟ್ರವು ಹೊಸ ಎತ್ತರವನ್ನು ತಲುಪುತ್ತಿದೆ. ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿ ತರುತ್ತಿದ್ದೇವೆ. ರಕ್ಷಣಾ ಕ್ಷೇತ್ರ ಇಂದು ಅತ್ಯಂತ ಪ್ರಬಲ ವಲಯವಾಗಿ ಬೆಳೆದಿದೆ ಎಂದು ಹೇಳಿದರು.
21ನೇ ಶತಮಾನದ ನವಭಾರತವು ಯಾವುದೇ ಅವಕಾಶ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಠಿಣ ಪರಿಶ್ರಮ ಹಾಕಲೂ ಹಿಂದೆಮುಂದೆ ನೋಡುವುದಿಲ್ಲ .ಭಾರತವು ಈಗ ಆಮದು ಮಾಡುವುದಿಲ್ಲ. ಈಗ ರಫ್ತು ಮಾಡುತ್ತಿದೆ. ಭಾರತವು 2025ರ ಹೊತ್ತಿಗೆ ರಫ್ತು ಪ್ರಮಾಣವನ್ನು 5 ಬಿಲಿಯನ್ ಡಾಲರ್ಗೆ ತೆಗೆದುಕೊಂಡು ಹೋಗಲಿದೆ.ಭಾರತವು ಲಾಂಚ್ ಪ್ಯಾಡ್ ತರಹ ಕೆಲಸ ಮಾಡಲಿದೆ. ಭಾರತವು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದೆ.ಅಮೃತ್ ಕಾಲದಲ್ಲಿ ಭಾರತವು ಪೈಲಟ್ ತರಹ ಮುಂದೆ ಹೋಗುತ್ತಿದೆ. ಇಂದಿನ ಭಾರತವು ವೇಗವಾಗಿ, ದೂರದ ಬಗ್ಗೆ ಯೋಚಿಸುತ್ತದೆ ಎಂದು ಹೇಳಿದರು.