ಬೆಂಗಳೂರು, ಫೆ 13 ( DaijiworldNews/MS): ವಿದ್ಯುತ್ ದರದಲ್ಲಿಯೂ ಭಾರೀ ಏರಿಕೆಯಾಗುವ ಸಾಧ್ಯತೆಯನ್ನು ಇಂಧನ ಸಚಿವ ಸುನಿಲ್ ಕುಮಾರ್ ತಳ್ಳಿ ಹಾಕಿದ್ದಾರೆ.
ವಿದ್ಯುತ್ ದರ ಏರಿಕೆ ಸುದ್ದಿ ಕುರಿತಾಗಿ ಸ್ಪಷ್ಟನೆ ನೀಡಿರುವ ಸಚಿವರು, ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ, ನಾಗರಾಜ್ ಯಾದವ್ ಅವರು ಪ್ರಸ್ತಾಪಿಸಿದ್ದ ವಿಷಯಕ್ಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. " ಬೆಲೆ ಏರಿಕೆ ನಡುವೆ ಸರ್ಕಾರ ಜನರಿಗೆ ವಿದ್ಯುತ್ ಬರೆ ಹಾಕಲು ಹೊರಟಿದೆ. ಮಾಧ್ಯಮಗಳಲ್ಲಿ ವಿದ್ಯುತ್ ದರ ಏರಿಕೆ ಅಂತ ಸುದ್ದಿ ಬಿತ್ತರವಾಗುತ್ತಿದ್ದು ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು ಎಂದು ನಾಗರಾಜ್ ಯಾದವ್ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್, ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಇಲ್ಲ. ಸರ್ಕಾರದ ಮುಂದೆ ವಿದ್ಯುತ್ ಬೆಲೆ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದರು. ಸದ್ಯಕ್ಕೆ ದರ ಏರಿಕೆ ಬಗ್ಗೆ ಯಾವುದೇ ಯೋಚನೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ಇಂಧನ ಹೊಂದಾಣಿಕೆಯ ಶುಲ್ಕವನ್ನು ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆದೇಶ ಹೊರಡಿಸಿತ್ತು.