ಬೆಂಗಳೂರು, ಫೆ 13 (DaijiworldNews/HR): ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.
ಹೂವಪ್ಪಗೌಡ ಎಂಬುವವರಿಂದ ಎಂ.ಪಿ.ಕುಮಾರಸ್ವಾಮಿ ಅವರು 1.35 ಕೋಟಿ ರೂಪಾಯಿ ಸಾಲ ಪಡೆದಿದ್ದು, ಈ ಹಣ ಪಾವತಿ ಸಂಬಂಧ ಶಾಸಕ ಕುಮಾರಸ್ವಾಮಿ ಅವರು ಹೂವಪ್ಪಗೌಡ ಅವರಿಗೆ ನೀಡಿದ್ದ 8 ಚೆಕ್ ಗಳು ಸಹ ಬೌನ್ಸ್ ಆಗಿತ್ತು.
ಇನ್ನು ಈ ಸಂಬಂಧ ಹೂವಪ್ಪಗೌಡ ಅವರು ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ 8 ಕೇಸ್ ದಾಖಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಪ್ರೀತ್ ಅವರು ಕುಮಾರಸ್ವಾಮಿ ಅವರಿಗೆ 8 ಕೇಸ್ ಗಳಲ್ಲಿ ತಲಾ 6 ತಿಂಗಳು ಜೈಲು ಶಿಕ್ಷೆ, ಸಾಲ ಮರುಪಾವತಿ ಮಾಡದಿದ್ದಲ್ಲಿ ತಲಾ 6 ತಿಂಗಳು ಒಟ್ಟು 4 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.