ಕೋಲಾರ, ಫೆ. 12 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಷರತ್ತುಬದ್ಧ ಸಾಲಮನ್ನಾ ಮಾಡಲಾಗುವುದು ಮತ್ತು ಮಹಿಳೆಯರಿಗೆ ನೀಡಲಾಗುತ್ತಿರುವ 50 ಸಾವಿರ ರೂಪಾಯಿ ಬಡ್ಡಿರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಭರವಸೆ ನೀಡಿದ್ದಾರೆ.
ಇಂದು ಕೋಲಾರದಲ್ಲಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸರಿಯಾಗಿ ಸಾಲದ ಕಂತು ಕಟ್ಟುತ್ತಿರುವ ರೈತರ ಸಾಲವನ್ನು ಮನ್ನಾ ಮಾಡಲಾಗುವುದು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೂ ಸಾಲದ ಕಂತು ಕಟ್ಟಿ ಎಂದು ಹೇಳಿದರು.
ಮಹಿಳೆಯರಿಗೆ ನೀಡಲಾಗುತ್ತಿರುವ 50 ಸಾವಿರ ರೂ. ಬಡ್ಡಿರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಗುವುದು. ಅಷ್ಟೇ ಅಲ್ಲ ರೈತರಿಗೆ ನೀಡಲಾಗುತ್ತಿರುವ ಬಡ್ಡಿರಹಿತ ಸಾಲವನ್ನು 5 ಲಕ್ಷಕ್ಕೆ ಏರಿಸುತ್ತೇವೆ. ಶೇ. 3ರ ಬಡ್ಡಿಯಲ್ಲಿ ರೈತರಿಗೆ ನೀಡುವ ಸಾಲವನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗೆ ಏರಿಸುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಬಡ್ಡಿರಹಿತ ಸಾಲದ ಪ್ರಮಾಣ ಏರಿಸುವ ಬಗ್ಗೆ ಮತ್ತು ಸಾಲ ಮನ್ನಾ ಬಗ್ಗೆ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುತ್ತೇವೆ, ಟೊಮ್ಯಾಟೊ ಮತ್ತು ಮಾವು ಸಂಸ್ಕರಣಾ ಘಟಕ ಮಾಡಿಕೊಡುತ್ತೇವೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುತ್ತೇವೆ, ಹಾಲಿಗೆ ಪ್ರೋತ್ಸಾಹ ಧನವನ್ನು 6 ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.