ಬೆಂಗಳೂರು, ಫೆ 14 (DaijiworldNews/HR): ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಕೋಳಿ ಮೊಟ್ಟೆ ಕೊಡುವ ಧೈರ್ಯ ಮಾಡಿದ್ದೇ ನಮ್ಮ ಬಿಜೆಪಿ ಸರಕಾರ, ಯಾವುದೇ ವಿರೋಧ ಬಂದರೂ ಅದನ್ನು ಮುಂದುವರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ, ಮೊಟ್ಟೆ ದರ ಹೆಚ್ಚಾಗಿದೆ ಎಂಬ ಸಬೂಬು ಕೊಟ್ಟು ಕಳೆದ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ನಿಂದ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿಲ್ಲ. ಈ ಹಿಂದೆ ಗುಣಮಟ್ಟದ ಮೊಟ್ಟೆಯೂ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಬಗ್ಗೆ 2007ಕ್ಕಿಂತ ಮುಂಚೆ ಚರ್ಚೆ ಆರಂಭವಾಗಿದ್ದು, ಕೊನೆಗೆ ಮೊಟ್ಟೆ ಕೊಡಬೇಕು ಎಂದು 2007ರಲ್ಲಿ ತೀರ್ಮಾನವಾಯಿತು. ಆದರೆ, ಆಗಿನ ಸರಕಾರಗಳಿಗೆ ಯಾವ ಪಕ್ಷದ ಅಥವಾ ಯಾರ ಒತ್ತಡ ಇತ್ತೋ ಗೊತ್ತಿಲ್ಲ. ಮೊಟ್ಟೆ ವಿತರಣೆ ಮಾಡಲು ನಾವು ಧೈರ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.