ನವದೆಹಲಿ, ಫೆ 14 (DaijiworldNews/DB): ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಪತ್ತೆಯಾದ ಲೀಥಿಯಂ ನಿಕ್ಷೇಪದ ಮೇಲೆ ದಾಳಿ ಮಾಡುವುದಾಗಿ ಉಗ್ರ ಸಂಘಟನೆಯೊಂದು ಬೆದರಿಕೆಯೊಡ್ಡಿದೆ.
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಬೆಂಬಲಿತ ಪೀಪಲ್ಸ್ ಆಯಂಟಿ ಫ್ಯಾಸಿಸ್ಟ್ ಫ್ರಂಟ್(ಪಿಎಎಫ್ಎಫ್) ಎಂಬ ಸಂಘಟನೆಯು ಈ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.
ರಿಯಾಸಿಯಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪವಿರುವುದಾಗಿ ಕೇಂದ್ರ ಘೋಷಿಸಿದ ಬೆನ್ನಲ್ಲೇ ಈ ಉಗ್ರ ಸಂಘಟನೆಯು ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ನಿಂದ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ನಿಕ್ಷೇಪದ ವಿರುದ್ದ ಸ್ಥಳೀಯರನ್ನು ಪ್ರಚೋದಿಸುವ ತಂತ್ರ ಹೂಡಿದೆ. ಭಾರತದ ಯಾವುದೋ ಕಂಪೆನಿ ಈ ಸಂಪನ್ಮೂಲಗಳನ್ನು ಲೂಟಿಗೈಯಲ್ಲಿ ನಾವು ಅವಕಾಶ ನೀಡಲಾರೆವು. ಅವರು ನಮ್ಮ ಭೂಮಿ ವಶಪಡಿಸಿಕೊಂಡು ಮನೆಗಳನ್ನು ನಾಶಪಡಿಸಿ ಸಂಪನ್ಮೂಲ ತೆಗೆದುಕೊಂಡು ಹೋಗುತ್ತಾರೆ. ಕೊನೆಗೆ ಮನುಷ್ಯರನ್ನೂ ಕೊಲ್ಲುತ್ತಾರೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸೇರಿದ ನೈಸರ್ಗಿಕ ಸಂಪನ್ಮೂಲಗಳನ್ನು ಅವರಿಗಾಗಿ ಮಾತ್ರ ಬಳಕೆ ಮಾಡಬೇಕು. ಯಾವುದೇ ಭಾರತೀಯ ಕಂಪೆನಿಗಳು ಇಲ್ಲಿನ ನೈಸರ್ಗಿಕ ಸಂಪನ್ಮೂಲ ಕದಿಯಲು ಬಂದರೂ ನಾವು ದಾಳಿ ಮಾಡುತ್ತೇವೆ. ಆದರೆ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ನಮ್ಮ ಸಮ್ಮತಿ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಉಗ್ರ ಸಂಘಟನೆಯ ಬೆದರಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸೈಬರ್ ಗುಪ್ತಚರ ವಿಶ್ಲೇಷಕ ನೀಲೇಶ್ ಪುರೋಹಿತ್ ಗಣಿ ಕೈಗಾರಿಕೆ ಮತ್ತು ಇವಿ ಉತ್ಪಾದನಾ ಕಂಪೆನಿಗಳು ಇಲ್ಲಿ ಆಗಮಿಸಿದರೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಇದರು ಪಾಕ್ ಐಎಸ್ಐಗೆ ಹಿನ್ನಡೆಯಾಗಲಿದೆ. ಇದರಿಂದಾಗಿಯೇ ಉಗ್ರ ಸಂಘಟನೆಗಳು ಬೆದರಿಕೆಯೊಡ್ಡಲು ಕಾರಣ ಎಂದಿದ್ದಾರೆ.