ನವದೆಹಲಿ, ಫೆ 14 (DaijiworldNews/HR): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ನಡೆದ ಘೋರ ದುರಂತದಲ್ಲಿ 40 ಸಿಆರ್ಪಿಎಫ್ ಯೋಧರು ಪ್ರಾಣ ಕಳೆದುಕೊಂಡು ಇಂದಿಗೆ ನಾಲ್ಕು ವರ್ಷ ಕಳೆದಿದ್ದು, ದೇಶಕ್ಕಾಗಿ ಮಡಿದ ವೀರ ಯೋಧರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆನೆದಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರ ಜಮ್ಮು-ಶ್ರೀನಗರ ವಿಭಾಗದಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ಟ್ರಕ್ ಮೇಲೆ ಈ ದಾಳಿ ನಡೆದಿತ್ತು.
ಇನ್ನು ಸ್ಫೋಟಕ ತುಂಬಿದ ಎಸ್ಯುವಿ ಸಿಆರ್ಪಿಎಫ್ ಬಸ್ ಒಂದಕ್ಕೆ ಡಿಕ್ಕಿ ಹೊಡೆದು 40 ಭಾರತೀಯ ಸಿಆರ್ಒಎಫ್ ಸೈನಿಕರನ್ನು ಕೊಂದಿದ್ದು, ದಾಳಿಯ ನಂತರ, ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು. ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬ 22 ವರ್ಷದ ಯುವಕನ ಆತ್ಮಹತ್ಯಾ ಬಾಂಬ್ ದಾಳಿಯ ವಿಡಿಯೊವನ್ನು ಪೋಸ್ಟ್ ಮಾಡಿದೆ.
ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಗೆ ಪ್ರತಕಾರವಾಗಿ 12ದಿನಗಳಲ್ಲಿ ಭಾರತದ ರಕ್ಷಣಾ ಪಡೆಗಳಿಂದ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿ ನಡೆಸಲಾಯಿತು. ಫೆಬ್ರವರಿ 26, 2019 ರ ಮುಂಜಾನೆ, ಭಾರತೀಯ ವಾಯುಪಡೆಯ ಹಲವಾರು ಜೆಟ್ಗಳು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು. ಭದ್ರತಾ ಪಡೆಗಳ ರೋಷಾವೇಶಕ್ಕೆ ಭಯೋತ್ಪಾದಕರು ಅಕ್ಷರಶಃ ನಡುಗಿ ಹೋಗಿದ್ದರು. ಜೈಶ್ ಸಂಘಟನೆಯ ಸುಮಾರು 500 ಭಯೋತ್ಪಾದಕರನ್ನು ಹತ್ಯೆಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುತ್ತೇನೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.