ಬೆಂಗಳೂರು, ಫೆ 14 (DaijiworldNews/DB): ಸಾಕಷ್ಟು ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಏರ್ಶೋದಲ್ಲಿ ಡಿಸ್ಪ್ಲೇ ಮಾಡಿದ್ದ ಎಚ್ಎಎಲ್ನ ಎಚ್ಎಲ್ಎಫ್ಟಿ-42 ಮಾರುತ್ ಯುದ್ಧ ವಿಮಾನದ ಮೇಲಿದ್ದ ಹನುಮಾನ್ ಚಿತ್ರವನ್ನು ಇದೀಗ ತೆರವುಗೊಳಿಸಲಾಗಿದೆ.
ಆಧುನಿಕ ಯುದ್ದ ವಿಮಾನ ತರಬೇತಿಯಲ್ಲಿ ಎಚ್ಎಲ್ಎಫ್ಟಿ-42 ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ವೈಮಾನಿಕ ಪ್ರದರ್ಶನದ ವೇಳೆ ಸೋಮವಾರ ವಿಮಾನದ ಮಾದರಿಯೊಂದರಲ್ಲಿ ಭಗವಾನ್ ಹನುಮಾನ್ ಚಿತ್ರ ಕಂಡು ಬಂದಿತ್ತು. ಆದರೆ ಈ ಚಿತ್ರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಒಂದು ಧರ್ಮಕ್ಕೆ ಸೇರಿದ ಚಿತ್ರವನ್ನು ಏರ್ಶೋದಲ್ಲಿ ಪ್ರದರ್ಶಿಸುವುದು ಸರಿಯಲ್ಲ ಎಂಬುದಾಗಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಹನುಮಾನ್ ಚಿತ್ರವನ್ನು ವಿಮಾನ ಮಾದರಿಯಲ್ಲಿ ಪ್ರದರ್ಶಿಸಿದ್ದಕ್ಕೆ ವಿವಾದ ಸೃಷ್ಟಿಯಾದ ಕೂಡಲೇ ಎಚ್ಚೆತ್ತುಕೊಂಡ ಆಯೋಜಕರು ಏರ್ಶೋನಲ್ಲಿ ಡಿಸ್ಪ್ಲೇ ಮಾಡಿದ್ದ ಭಗವಾನ್ ಹನುಮಾನ್ ಚಿತ್ರವನ್ನು ತೆಗೆದು ಹಾಕುವಂತೆ ಎಚ್ಎಎಲ್ಗೆ ಸೂಚಿಸಿದ್ದಾರೆ. ಹೀಗಾಗಿ ಎಚ್ಎಎಲ್ ಮಂಗಳವಾರ ಚಿತ್ರ ತೆಗೆದು ಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಐದು ದಿನಗಳ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡಿದೆ. ಆಗಸದಲ್ಲಿ ವರ್ಣಮಯವಾಗಿ ಲೋಹದ ಹಕ್ಕಿಗಳ ಕಲರವ ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ಈ ವೈಮಾನಿಕ ಪ್ರದರ್ಶನಕ್ಕೆ ಆಗಮಿಸುತ್ತಿದ್ದಾರೆ.