ನವದೆಹಲಿ, ಫೆ 14 (DaijiworldNews/DB): ಪುಲ್ವಾಮಾದಲ್ಲಿ ಗುಪ್ತಚರ ವೈಫಲ್ಯದಿಂದಾಗಿ ಮಡಿದ 40 ಸಿಆರ್ಪಿಎಫ್ ಹುತಾತ್ಮರಿಗೆ ನಾವು ಇಂದು ನಮನ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇನ್ನು ಸಿಂಗ್ ಅವರ ಈ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಪುಲ್ವಾಮಾ ದಾಳಿಯಲ್ಲಿ ಮಡಿದ 40 ಸಿಆರ್ಪಿಎಫ್ ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ ಮಂಗಳವಾರ ಟ್ವೀಟ್ ಮಾಡಿರುವ ಅವರು ಕೇಂದ್ರ ಗುಪ್ತಚರ ವೈಫಲ್ಯದಿಂದಾಗಿ ಪುಲ್ವಾಮ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಅವರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇನ್ನು ಸಿಂಗ್ ಅವರ ಈ ಟ್ವೀಟ್ಗೆ ರಾಜಕೀಯವಾಗಿ ಅಸಮಾಧಾನ ವ್ಯಕ್ತವಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪುಲ್ವಾಮಾದಲ್ಲಿನ ಉಗ್ರರ ದಾಳಿ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಸಮರಗಳು ನಡೆಯುತ್ತಲೇ ಇವೆ. ಉಗ್ರರು ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನು ತರಲು ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಯೋಧರು ಸಾವನ್ನಪ್ಪಲು ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಬಂದಿವೆ.