ವಾರಾಣಸಿ, ಫೆ 14 (DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೋಮವಾರ ತಡರಾತ್ರಿ ಪ್ರಯಾಣಿಸುತ್ತಿದ್ದ ವಿಮಾನವನ್ನು ಲ್ಯಾಂಡ್ ಮಾಡಲು ವಾರಾಣಸಿಯ ವಿಮಾನ ನಿಲ್ದಾಣದ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಆರೋಪವನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಕೇರಳದ ವಯನಾಡ್ನಿಂದ ವಾಪಸ್ ಆಗುತ್ತಿದ್ದ ರಾಹುಲ್ ಗಾಂಧಿಯವರ ವಿಮಾನವು ಬಾಬಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಅಜಯ್ ರಾಯ್ ಹೇಳಿದ್ದಾರೆ.
ಇನ್ನು ನಾನು ಮತ್ತು ನಮ್ಮ ಪಕ್ಷದ ನಾಯಕರು ರಾಹುಲ್ ಗಾಂಧಿಯವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆವು. ಆದರೆ, ನಮ್ಮ ನಾಯಕರ ವಿಮಾನಕ್ಕೆ ಕೊನೆಯ ಕ್ಷಣದಲ್ಲಿ ಲ್ಯಾಂಡ್ ಆಗಲು ಅವಕಾಶ ನಿರಾಕರಿಸಲಾಗಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ನಿರ್ದೇಶಕ ಅರ್ಯಾಮಾ ಸನ್ಯಾಲ್, ರಾಹುಲ್ ವಿಮಾನ ಬರುವ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.