ಚಾಮರಾಜನಗರ, ಫೆ 14 (DaijiworldNews/DB): ಪಾನಿಪೂರಿ ತಿಂದ ಬಳಿಕ ವ್ಯಾಪಾರಿಯ ಮೊಬೈಲ್ ಪಡೆದುಕೊಂಡು ತನ್ನ ಖಾತೆಗೆ ಆತನ ಖಾತೆಯಿಂದ 30 ಸಾವಿರ ರೂ. ಜಮೆ ಮಾಡಿಕೊಂಡು ವಂಚಿಸಿದ ಆರೋಪಿಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಆರೋಪಿ. ಕೊಳ್ಳೇಗಾಲಕ್ಕೆ ಸ್ನೇಹಿರೊಂದಿಗೆ ತೆರಳಿದ್ದ. ಈ ವೇಳೆ ಅಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕೇಶ್ ಎಂಬವರ ಪಾನಿಪೂರಿ ಅಂಗಡಿಗೆ ತೆರಳಿ ಮೂರು ಪ್ಲೇಟ್ ಪಾನಿಪೂರಿ ತಿಂದಿದ್ದಾನೆ. ಬಳಿಕ ಫೋನ್ ಪೇ ಮಾಡುವುದಾಗಿ ಹೇಳಿ ವ್ಯಾಪಾರಿಯ ಫೋನ್ ಪಡೆದು ಯಾರಿಗೋ ಕರೆ ಮಾಡಿದ್ದಾನೆ. ಬಳಿಕ ಆತ ಹಣ ಕಳುಹಿಸಿದ್ದು ಚೆಕ್ ಮಾಡುವಂತೆ ವ್ಯಾಪಾರಿ ಲೋಕೇಶ್ ಬಳಿ ಹೇಳಿದ್ದಾನೆ. ಲೋಕೇಶ್ ಚೆಕ್ ಮಾಡಲೆಂದು ಫೋನ್ ಪೇ ತೆರೆದಾಗ ಪಾಸ್ವರ್ಡ್ ನೋಡಿಕೊಂಡಿರುವ ಆರೋಪಿ ಬಳಿಕ ನಿಮ್ಮ ಫೋನ್ನಲ್ಲಿ ಸರ್ವರ್ ಸಮಸ್ಯೆ ಇದೆ ಎಂದು ಹೇಳಿಕೊಂಡು ಪರಿಶೀಲನೆಗೆಂದು ಫೋನ್ ತೆಗೆದುಕೊಂಡಿದ್ದಾನೆ. ಪರಿಶೀಲನೆ ನೆಪದಲ್ಲಿ ಪಾಸ್ವರ್ಡ್ ಬಳಸಿ ಫೋನ್ ಪೇ ಓಪನ್ ಮಾಡಿ ಅದರಿಂದ ತನ್ನ ಅಕೌಂಟ್ಗೆ 30 ಸಾವಿರ ರೂಪಾಯಿಯನ್ನು ಕಳುಹಿಸಿದ್ದಾನೆ. ಬಳಿಕ ಪಾನಿಪೂರಿಯ 120 ರೂಪಾಯಿ ಹಣವನ್ನು ವ್ಯಾಪಾರಿ ಅಕೌಂಟ್ಗೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.
ವಂಚನೆ ಕುರಿತು ಅರಿವಿಗೆ ಬಂದ ಕೂಡಲೇ ಲೋಕೇಶ್ ಅವರು ಫೆಬ್ರವರಿ 11ರಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಕಾರ್ಯಾಚರಣೆಗಿಳಿದ ಚಾಮರಾಜನಗರ ಸಿಇಎನ್ ಠಾಣೆ ಪಿಐ ಆನಂದ್ ಮತ್ತು ತಂಡ ವಂಚಕನನ್ನು ಬಂಧಿಸಿ ಆತನಿಂದ 30 ಸಾವಿರ ರೂಪಾಯಿಯನ್ನು ಪಡೆದು ವ್ಯಾಪಾರಿಗೆ ನೀಡಿದ್ದಾರೆ.