ಪಿಲ್ಭಿಟ್, ಫೆ 14 (DaijiworldNews/DB): ಸಿರಿವಂತರು ಬ್ಯಾಂಕ್ ಸಾಲವನ್ನು ಸುಲಭವಾಗಿ ಪಡೆಯುತ್ತಿದ್ದರೆ, ಸಾಮನ್ಯ ವ್ಯಕ್ತಿಗಳು ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಮ್ಮ ದೇಶದಲ್ಲಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಲ್ಸಂದಾದ ಬಮ್ರೌಲಿ ಗ್ರಾಮ ಹಾಗೂ ಬರ್ಖೇಡಾದ ಮಾಧ್ವಪುರ್ ಗ್ರಾಮದಲ್ಲಿ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿ ಸಾಲವನ್ನು ಮರುಪಾವತಿ ಮಾಡಲು ಸ್ವಲ್ಪ ತಡ ಮಾಡಿದರೂ ಅವನನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಆತನ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ. ಅದೇ ಶ್ರೀಮಂತರು ಸಾಲ ಮರುಪಾವತಿಸದಿದ್ದರೂ ಗೌರವದಿಂದ ಹಾಯಾಗಿ ಜೀವನ ನಡೆಸುತ್ತಾರೆ ಎಂದರು.
ಬೀಡಾಡಿ ದಿನಗಳ ಉಪಟಳ ರೈತರ ಮೇಲೆ ದಿನೇದಿನೇ ಆಗುತ್ತಿದೆ. ಕೇವಲ ಬೆಳೆಯಲ್ಲ, ದೇಶದ ಭವಿಷ್ಯವನ್ನೇ ಈ ದನಗಳು ನಾಶ ಮಾಡುತ್ತಿವೆ. ರೈತರಿಗೆ ಸಂಕಷ್ಟ ತಂದೊಡ್ಡಿರುವ ವ್ಯಕ್ತಿಗಳನ್ನೇ ಬೆಳೆ ನಾಶ ವಿಚಾರದಲ್ಲಿ ಉತ್ತರದಾಯಿಗಳನ್ನಾಗಿ ಮಾಡಬೇಕು ಎಂದವರು ಇದೇ ವೇಳೆ ಆಗ್ರಹಿಸಿದರು.
ಹಲವು ರೈತರು ಸಾಲದಲ್ಲಿದ್ದಾರೆ. ಇದೀಗ ಬಿಡಾಡಿ ದನಗಳಿಂದಾಗಿ ಆಗಿರುವ ಬೆಳೆನಾಶದಿಂದಾಗಿ ಸಾಲ ಮರುಪಾವತಿಯೂ ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ದೌರ್ಜನ್ಯಗಳು ಸಹಿಸಲಸಾಧ್ಯ ಎಂದವರು ಕಳವಳ ವ್ಯಕ್ತಪಡಿಸಿದರು.