ಇಂದೋರ್, ಫೆ 14 (DaijiworldNews/DB): ಕೃಷಿ ಉಡಾನ್ ಯೋಜನೆಯಡಿ 21 ವಿಮಾನ ನಿಲ್ದಾಣಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಇಂದೋರ್ನಲ್ಲಿ ನಡೆದ ಜಿ-20 ಕೃಷಿ ಪ್ರತಿನಿಧಿಗಳ ಸಭೆಯ ಎರಡನೇ ದಿನದ ಚರ್ಚೆಯ ಕುರಿತು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕೃಷಿ ಉಡಾನ್ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈಗಾಗಲೇ ಈ ಯೋಜನೆಯಡಿ ಕನಿಷ್ಠ 31 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 21 ವಿಮಾನ ನಿಲ್ದಾಣಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗುತ್ತಿದೆ. ಈ ಸಂಬಂಧ ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಕೇಷಿ ಉತ್ಪನ್ನಗಳ ತ್ವರಿತ ಸಾಗಣೆಗೆ ವಿಶೇಷ ವಿಮಾನಗಳು ಕೃಷಿ ಉಡಾನ್ ಯೋಜನೆಯಡಿ ಬರುತ್ತವೆ. ಈ ಯೋಜನೆ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ನಿಂಬೆಹಣ್ಣು, ಹಲಸು, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಳನ್ನು ಜರ್ಮನಿ, ಲಂಡನ್, ಸಿಂಗಾಪುರ ಮತ್ತು ಫಿಲಿಫೈನ್ಸ್ನಂತಹ ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತಿದೆ. ಅಲ್ಲದೆ ದೇಶದೊಳಗೆ ಕೂಡಾ ಸಾಗಾಟಕ್ಕೆ ಹೆಚ್ಚು ಅನುಕೂಲವಾಗಿದೆ ಎಂದು ಅವರು ತಿಳಿಸಿದರು.