ಶ್ರೀನಗರ, ಫೆ 14 (DaijiworldNews/DB): ಪುಲ್ವಾಮಾ ದಾಳಿಗೆ ಸಂಚು ಹೂಡಿದ್ದ 19 ಮಂದಿ ಭಯೋತ್ಪಾದಕರ ಪೈಕಿ 8 ಮಂದಿಯನ್ನು ಹೊಡೆದುರುಳಿಸಲಾಗಿದೆ. 7 ಉಗ್ರರನ್ನು ಜೈಲಿಗೆ ಕಳುಹಿಸಲಾಗಿದ್ದು, ನಾಲ್ವರು ಪಾಕಿಸ್ತಾನದಲ್ಲಿದ್ದಾರೆ ಎಂದು ಕಾಶ್ಮೀರ ವಲಯದ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಪುಲ್ವಾಮಾದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ಹಲವರು ನಮನ ಸಲ್ಲಿಸಿದ್ದು, ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.
ಕಣಿವೆಯಲ್ಲಿ 37 ಉಗ್ರರು ಸಕ್ರಿಯರಾಗಿದ್ದಾರೆ. ಆದರೆ ಭದ್ರತಾ ಸಿಬಂದಿ ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೈಶ್ ಎ ಮೊಹಮ್ಮದ್ನ ಮೂಸಾ ಸುಲೆಮನಿ, ಪಾಕ್ ಉಗ್ರರು ಸೇರಿದಂತೆ ಶೀಘ್ರ ಏಳೆಂಟು ಭಯೋತ್ಪಾದಕರನ್ನು ಹೊಡೆದುರುಳಿಸಲಾಗುವುದು ಎಂದವರು ತಿಳಿಸಿದರು.
ಜೈಶೆ ಮೊಹಮ್ಮದ್ನ ಭಯೋತ್ಪಾದಕನೋರ್ವ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ ಭಾರತೀಯ ಸೈನ್ಯದ 40 ಮಂದಿ ಯೋಧರು ಹುತಾತ್ಮರಾದರು. ಈ ಘಟನೆ ಬಳಿಕ ಭಾರತೀಯ ಸೈನ್ಯವು ಜೈಶ್-ಎ-ಮೊಹಮ್ಮದ್ ಉಗ್ರರ ನೆಲೆಗಳನ್ನು ಬಾಲಾಕೋಟ್ ದಾಳಿ ಮೂಲಕ ನೆಲಸಮಗೊಳಿಸಿತ್ತು.