ಬಳ್ಳಾರಿ, ಫೆ 14 (DaijiworldNews/DB): ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಗಡ್ಡ ಬಿಟ್ಟಿರುವುದೊಂದು ಹೊರತುಪಡಿಸಿ ಬೇರೇನು ಆಗಿದೆ ಎಂಬುದು ಗೊತ್ತಿಲ್ಲ ಎಂದು ಸಚಿವ ಆನಂದ್ ಸಿಂಗ್ ಲೇವಡಿ ಮಾಡಿದ್ದಾರೆ.
ಕಂಪ್ಲಿಯಲ್ಲಿ ನಡೆದ ವಿಜಯ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿರುವುದು ಏತಕ್ಕೆ ಎಂದು ಗೊತ್ತಿಲ್ಲ. ಯಾತ್ರೆ ಮೂಲಕ ಏನು ಮಾಡಿದ್ದಾರೆಂಬುದೂ ತಿಳಿದಿಲ್ಲ. ರಾಹುಲ್ ಗಾಂಧಿಯವರು ಗಡ್ಡ ಬಿಟ್ಟಿರುವುದೊಂದು ಕಾಣುತ್ತಿದೆಯಷ್ಟೇ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದರಿಂದಾಗಿ ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮವನ್ನು ಕಾಶ್ಮೀರದಲ್ಲಿ ಮಾಡಲು ಅವರಿಗೆ ಸಾಧ್ಯವಾಯಿತು. ಇಲ್ಲವಾದರೆ ಗಡಿಯವರೆಗೂ ಹೋಗಲು ಅವರಿಂದ ಅಸಾಧ್ಯವಾಗುತ್ತಿತ್ತು ಎಂದು ಕುಟುಕಿದರು.
ಕ್ಷೇತ್ರಾಭಿವೃದ್ದಿಗೇ ಗಮನ ಹರಿಸದ ಕಾಂಗ್ರೆಸ್ಸಿಗರಿಂದ ದೇಶಾಭಿವೃದ್ದಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ನಲ್ಲಿ ಗುಂಡಿಗೆ ಇಲ್ಲದ ಗಂಡುಗಳೇ ಇದ್ದಾರೆ. ನಮ್ಮಲ್ಲಿ ಗುಂಡಿಗೆ ಇರುವ ನಾಯಕರು ಹಲವರಿದ್ದಾರೆ ಎಂದರು.
ಕಾಂಗ್ರೆಸ್ ಚುನಾವಣೆಗಾಗಿ ಸಮಾವೇಶ ನಡೆಸುವ ಪಕ್ಷ. ಆದರೆ ಬಿಜೆಪಿ ಸುಳ್ಳು ಆಶ್ವಾಸನೆ ಕೇಳಿ ಮತ ಕೇಳುವ ಪಕ್ಷವಲ್ಲ. ದೇಶ ಕಟ್ಟುವ ಕಾಯಕದಲ್ಲಿ ತೊಡಗಿರುವ ಪಕ್ಷ ಬಿಜೆಪಿ ಎಂದವರು ಹೇಳಿದರು.