ನವದೆಹಲಿ, ಫೆ 14 (DaijiworldNews/DB): ಮರೆ ಮಾಚಲು ಏನಿಲ್ಲವೆಂದರೆ ತನಿಖೆಗೆ ಹಿಂಜರಿಕೆ ಯಾಕೆ? ಅದಾನಿ ಸಂಸ್ಥೆಗಳ ಮೇಲಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅದಾನಿ ಸಂಸ್ಥೆ ವಿಚಾರದಲ್ಲಿ ಮರೆ ಮಾಚಲು ಏನೂ ಇಲ್ಲ ಎಂಬುದಾಗಿ ಬಿಜೆಪಿಯುವರು ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ಜೆಪಿಸಿ ತನಿಖೆಗೆ ಒಪ್ಪಿಸಲು ಸಮಸ್ಯೆ ಏನು? ಪ್ರಶ್ನಿಸಿದರೆ ಮೌನ ವಹಿಸುವಂತೆ ನಮಗೆ ಬೆದರಿಕೆ ಹಾಕಲಾಗುತ್ತದೆ ಎಂದು ಆರೋಪಿಸಿದರು.
ಷೇರು ಬೆಲೆಯ ಮೇಲೆ ಅದಾನಿ ಸಮೂಹ ಕೃತಕ ಪರಿಣಾಮ ಉಂಟು ಮಾಡುತ್ತಿದೆಯಲ್ಲದೆ ಲೆಕ್ಕಪತ್ರಗಳಲ್ಲಿಯೂ ಆ ಸಂಸ್ಥೆ ವಂಚನೆ ಎಸಗುತ್ತಿದೆ ಎಂಬುದಾಗಿ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ಆರೋಪಿಸಿತ್ತು. ಈ ಆರೋಪ ಬಹಿರಂಗವಾಗುತ್ತಿದ್ದಂತೆ ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯದಲ್ಲಿಯೂ ಕುಸಿತವಾಗಿತ್ತು. ಬಳಿಕ ಸಂಸತ್ತಿನಲ್ಲಿ ಇದೇ ವಿಚಾರ ಹಿಡಿದುಕೊಂಡು ವಿಪಕ್ಷ ನಾಯಕರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದವು. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಅಥವಾ ಜಂಟಿ ಸಂಸದೀಯ ಸಮಿತಿ ಮೂಲಕ ಪ್ರಕರಣದ ತನಿಖೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿದ್ದವು.