ನವದೆಹಲಿ, ಫೆ. 14 (DaijiworldNews/SM): ಹಿಂಡೆನ್ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅದಾನಿ ಸಮೂಹ ಮತ್ತು ಅದರ ಸಹಚರರ ವಿರುದ್ಧ ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಾ ಠಾಕೂರ್ ವಕೀಲ ವರೀಂದರ್ ಕುಮಾರ್ ಶರ್ಮಾ ಮೂಲಕ ತಮ್ಮ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರು ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿರುವ ಅದಾನಿ ಸಮೂಹ ಸಂಸ್ಥೆಗಳು ಮತ್ತು ಅದರ ಸಹಚರರ ವಿರುದ್ಧ ತನಿಖೆ ನಡೆಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ, ಇಡಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ, ಇಐಬಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಸೆಬಿ ಮತ್ತಿತರ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಗೆ ಕೋರಿದ್ದಾರೆ.
ಅದಾನಿ ಎಂಟರ್ಪ್ರೈಸಸ್ ಭಾರಿ ಮೊತ್ತದ ಸಾರ್ವಜನಿಕ ಹಣವನ್ನು ಹೂಡಿಕೆ ಮಾಡುವಲ್ಲಿ ಭಾರತೀಯ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾತ್ರ ಕುರಿತು ತನಿಖೆ ಮಾಡಲು ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಅವರು ಉನ್ನತ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.