ನವದೆಹಲಿ, ಫೆ 15 (DaijiworldNews/DB): ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಮತ್ತು ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದೂ ಕೂಡಾ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಸಂಸ್ಥೆಯ ಉದ್ಯೋಗಿಗಳ ಮೊಬೈಲ್, ಲ್ಯಾಪ್ಟಾನ್ಗಳನ್ನು ವಶಪಡಿಸಿಕೊಂಡು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ತೆರಿಗೆ ವಂಚನೆ ಆರೋಪದಡಿ ಬಿಬಿಸಿ ಮಾಧ್ಯಮ ಸಂಸ್ಥೆ ಮೇಲೆ ಐಟಿ ದಾಳಿ ನಡೆಸಿದೆ. ಮಂಗಳವಾರ ಬೆಳಗ್ಗೆ 11ಗಂಟೆಯಿಂದ ಶೋಧ ಕಾರ್ಯ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಮುಂಬೈ, ದೆಹಲಿ ಕಚೇರಿಯೊಂದಿಗೆ ಇತರ ಎರಡು ಕಚೇರಿಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ತೆರಿಗೆ ನಿಯಮಗಳ ಉಲ್ಲಂಘನೆಯೊಂದಿಗೆ ಹಣ ಅಕ್ರಮ ವರ್ಗಾವಣೆ ಆರೋಪವೂ ಬಿಬಿಸಿ ಮೇಲಿದೆ. ಈ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆಯೇ ಸಂಸ್ಥೆಗೆ ನೋಟಿಸ್ ನೀಡಲಾಗಿತ್ತಾದರೂ, ಬಿಬಿಸಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಲ್ಲದೆ ಹಣದ ಬಗ್ಗೆ ಲೆಕ್ಕ ಒದಗಿಸದೆ ಅಕ್ರಮವಾಗಿ ಬೇರೆ ಕಡೆಗೆ ಆದಾಯವನ್ನು ಸಂಸ್ಥೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಬ್ರಿಟಿಷ್ ಮಾಧ್ಯಮ ಸಂಸ್ಥೆ ಬಿಬಿಸಿ ಮೇಲೆ ಭಾರತದಲ್ಲಿ ಐಟಿ ದಾಳಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಯುಕೆ ಸರ್ಕಾರ, ನಾವು ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಆದರೆ ಈ ವಿಚಾರದಲ್ಲಿ ತೀರ್ಪು ಕೊಡುವ ವಿಚಾರದಲ್ಲಿ ನಾವಿಲ್ಲ. ಭಾರತದ ಅಧಿಕಾರಿಗಳ ಬಳಿಯೇ ಮಾಹಿತಿ ಕೇಳಬೇಕು ಎಂದು ತಿಳಿಸಿದೆ.