ರಾಮನಗರ, ಫೆ 15 (DaijiworldNews/DB): ಮಾಜಿ ಸಂಸದೆ ರಮ್ಯಾ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ಅವರ ಸ್ಪರ್ಧೆ ಕುರಿತಾಗಿ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಚನ್ನಪಟ್ಟಣದಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೆ ರಮ್ಯಾ ಅಲ್ಲಿ ಸ್ಪರ್ಧಿಸುವ ಮಾಹಿತಿಗಳು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿಯಿಂದ ಬಿಜೆಪಿಗೆ ಲಾಭವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂಬತ್ತು ವರ್ಷದಿಂದ ಪ್ರಧಾನಿಯಾಗಿರುವ ಮೋದಿಯವರು ಒಂಬತ್ತು ಬಾರಿಯೂ ರಾಜ್ಯಕ್ಕೆ ಬಂದಿಲ್ಲ. ಆದರೆ ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾರ್ಯಕ್ರಮಗಳ ನೆಪವೊಡ್ಡಿ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರಷ್ಟೇ ಎಂದರು.
ನಮ್ಮದು ರಾಜ್ಯ ಸರ್ಕಾರದ ವಿರುದ್ದದ ಹೋರಾಟವೇ ಹೊರತು ಕೇಂದ್ರದ ವಿರುದ್ದವಲ್ಲ. ಶೇ. 40 ಕಮಿಷನ್ ಸರ್ಕಾರ ರಾಜ್ಯದಲ್ಲಿದೆ ಎಂದು ಬಿಜೆಪಿಯ ಹಿರಿಯ ಶಾಸಕರೇ ಹೇಳಿಕೊಂಡಿದ್ದಾರೆ. ಹಣ ಕೊಟ್ಟರೆ ಮಾತ್ರ ಮುಖ್ಯಮಂತ್ರಿ, ಮಂತ್ರಿಯಾಗಲು ಸಾಧ್ಯ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ಅವರದೇ ಪಕ್ಷದ ಶಾಸಕರು ಹೇಳಿರುವ ಈ ವಿಚಾರದ ಬಗ್ಗೆ ಆ ಪಕ್ಷದ ವರಿಷ್ಠರು ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದವರು ಪ್ರತಿಪಾದಿಸಿದರು.
ರಾಜ್ಯ ರಾಜಕಾರಣಕ್ಕೆ ಬರುವಂತೆ ಒತ್ತಡಗಳಿವೆ. ಆದರೆ ನಾನು ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಬಗ್ಗೆ ಚಿಂತಿಸಿಲ್ಲ. ಪಕ್ಷ ಸಂಘಟನೆ, ವರಿಷ್ಠರು ನೀಡಿದ ಜವಾಬ್ದಾರಿಯನ್ನು ಪಾಲಿಸುವುದಷ್ಟೇ ನನ್ನ ಕೆಲಸ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ನಿಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದರು.