ತಿರುವನಂತಪುರಂ, ಫೆ 15 (DaijiworldNews/DB): ವಸತಿ ಯೋಜನೆಯೊಂದರ ಅಕ್ರಮ ಆರೋಪ ಸಂಬಂಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಎಂ. ಶಿವಶಂಕರ್ ಬಂಧಿತ ಆರೋಪಿ. ಕಳೆದ ತಿಂಗಳಷ್ಟೇ ನಿವೃತ್ತರಾಗಿದ್ದ ಶಿವಶಂಕರ್ ಅವರನ್ನು ತ್ರಿಶೂರ್ ಜಿಲ್ಲೆಯ ವಡಂಕ್ಕಚೇರಿಯಲ್ಲಿ ಯುಎಇ ಮೂಲದ ಕಂಪೆನಿ ಪ್ರಾಯೋಜಿತ ವಸತಿ ಯೋಜನೆಯನ್ನು ಯನಿಟಾಕ್ಗೆ ನೀಡಲು ಶಿವಶಂಕರ್ ಲಂಚ ಪಡೆದಿದ್ದಾರೆಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಅವರನ್ನು ಕೊಚ್ಚಿಯಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ಮಂಗಳವಾರ ತಡರಾತ್ರಿ ಬಂಧಿಸಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು ಕಮಿಷನ್ ರೂಪದಲ್ಲಿ ವಿವಿಧ ವ್ಯಕ್ತಿಗಳಿಗೆ 4 ಕೋಟಿ ರೂ.ಗಳಿಗೂ ಮಿಕ್ಕಿ ಹಣವನ್ನು ನೀಡಲಾಗಿದೆ ಎಂದು ಕಂಪೆನಿ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದರು. ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಬ್ಯಾಂಕ್ ಲಾಕರ್ನಿಂದ 1 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಹಣ ಶಿವಶಂಕರ್ಗೆ ಸೇರಿದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈತ 2020ರ ಅಕ್ಟೋಬರ್ ತಿಂಗಳಿನಲ್ಲಿ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿತನಾಗಿದ್ದರು. ಆರೋಪದ ಹಿನ್ನೆಲೆಯಲ್ಲಿ ಸೇವೆಯಿಂದಲೂ ಅಮಾನಾತಾಗಿದ್ದ ಅವರು, ಬಳಿಕ ಜಾಮೀನು ಪಡೆದು ಸೇವೆಗೆ ಮರು ಸೇರ್ಪಡೆಯಾಗಿದ್ದರು.