ನವದೆಹಲಿ, ಫೆ 15 (DaijiworldNews/DB): ಅದಾನಿ ಗ್ರೂಪ್ ವಿರುದ್ಧದ ಹಣಕಾಸು ಅಕ್ರಮಗಳು ಮತ್ತು ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳ ಕುರಿತು ತನಿಖೆ ನಡೆಸುವಂತೆ ಕೋರಿ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರಿಗೆ ಪತ್ರ ಬರೆದಿದ್ದಾರೆ.
ಟ್ವಿಟರ್ನಲ್ಲಿ ಬುಧವಾರ ಜೈರಾಮ್ ರಮೇಶ್ ಅವರು ಪತ್ರವನ್ನು ದಾಸ್ ಅವರಿಗೆ ಪೋಸ್ಟ್ ಮಾಡಿದ್ದು, ಅದಾನಿ ಗ್ರೂಪ್ನ ಅತಿಯಾದ ಸಾಲದ ಮಾನ್ಯತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಆ ಸಂಸ್ಥೆ ಅಸ್ಥಿರಗೊಳಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅದಾನಿ ಗ್ರೂಪ್ ತನ್ನ ಸ್ಟಾಕ್ ಮೌಲ್ಯವನ್ನು ಕೃತಕವಾಗಿ ಜಾಸ್ತಿ ಮಾಡಿದೆ. ಅಲ್ಲದೆ ಷೇರುಗಳನ್ನು ಒತ್ತೆಯಿಟ್ಟು ಹಣ ಗಳಿಸಿರುವುದರಿಂದ ಷೇರು ಮೌಲ್ಯ ಕಡಿಮೆಯಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಎಲ್ಐಸಿ ಮತ್ತು ಎಸ್ಬಿಐಯಂತಹ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಅದಾನಿ ಗ್ರೂಪ್ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿವೆ. ಇವೆಲ್ಲವೂ ಆರ್ಬಿಐಯ ಆರ್ಥಿಕ ಸ್ಥಿರತೆ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ತನಿಖೆ ಮಾಡಿ ಖಾತ್ರಿ ಮಾಡಿಕೊಳ್ಳಬೇಕು ಎಂದೂ ಹೇಳಿದ್ದಾರೆ.