ಚಿತ್ರದುರ್ಗ, ಫೆ 15 (DaijiworldNews/DB): ಕಾಂಗ್ರೆಸ್ ಸರ್ಕಾರ ಇದ್ದಾಗ ಮತ್ತು ಬಿಜೆಪಿ ಸರ್ಕಾರದ ಆಡಳಿತದ ವೇಳೆ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆಯಾಗಲಿ. ಧಮ್ ಇದ್ದಲ್ಲಿ ಬಿಜೆಪಿಯವರು ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಮೂರೂವರೆ ವರ್ಷವಾಗಿದೆ. ನಮ್ಮ ಸರ್ಕಾರ ಇರುವಾಗ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಇವರು ತನಿಖೆ ಮಾಡಿದಬೇಕಿತ್ತು. ಯಾಕೆ ಸುಮ್ಮನಿದ್ದಾರೆ? ನಮ್ಮ ಆಡಳಿತದ ವೇಳೆ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಮತ್ತು ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಇವರು ತನಿಖೆ ಮಾಡಿಸಲಿ ಎಂದರು.
ನಮ್ಮ ಸರ್ಕಾರ ಇದ್ದ ವೇಳೆ ಭ್ರಷ್ಟಾಚಾರವಾಗಿದೆ ಎಂದು ಮಾತನಾಡುತ್ತಾರೆ. ಹಾಗಾದರೆ ವಿರೋಧ ಪಕ್ಷದಲ್ಲಿದ್ದವರು ಆಗ ಏನು ಮಾಡುತ್ತಿದ್ದರು? ಕಡ್ಲೆಪುರಿ ತಿನ್ನುತ್ತಾ ಕುಳಿತಿದ್ದರಾ? ಎಂದು ಅವರು ಪ್ರಶ್ನಿಸಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ನಡೆಸುತ್ತೇವೆ. ಲೂಟಿಕೋರರನ್ನು ಜೈಲಿಗೆ ಕಳಿಸಿಯೇ ಸಿದ್ದ ಎಂದು ಈ ವೇಳೆ ಸಿದ್ದರಾಮಯ್ಯ ಗುಡುಗಿದರು.