ಚಂಡೀಗಢ, ಫೆ 15 (DaijiworldNews/DB): ರಾಜ್ಯದ ಅಭಿವೃದ್ದಿ ಬಗ್ಗೆ ಜನರಿಂದ ಚುನಾಯಿತರಾದವರು ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಆಯ್ಕೆಯಾದವರಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಸಿಎಂ ಮಾನ್ ಅವರು ಸಂವಿಧಾನದ ಪ್ರಕಾರ ಹೋಗದೆ ತಮ್ಮ ಇಷ್ಟದ ಪ್ರಕಾರ ಆಡಳಿತ ನಡೆಸುತ್ತಿದ್ದಾರೆ ಎಂಬ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ಮಾನ್, ರಾಜ್ಯಪಾಲರ ನೇಮಕಾತಿ ಮಾನದಂಡಗಳ ಬಗ್ಗೆ ರಾಜ್ಯವಾಸಿಗಳಿಗೇ ಸ್ಪಷ್ಟತೆ ಇಲ್ಲದಿರುವಾಗ ಕೇಂದ್ರ ಸರ್ಕಾರ ಆ ನೇಮಕಾತಿಗಳನ್ನು ಹೇಗೆ ಮಾಡುತ್ತದೆ ಎಂಬುದು ಜನರ ಪ್ರಶ್ನೆ. ಪ್ರಾಂಶುಪಾಲರನ್ನು ಸಿಂಗಾಪುರಕ್ಕೆ ಕಳುಹಿಸುವ ರಾಜ್ಯದ ನಿರ್ಧಾರವನ್ನು ಪ್ರಶ್ನಿಸುವುದಕ್ಕೂ ಮುನ್ನ, ಕೇಂದ್ರವು ರಾಜ್ಯಪಾಲ ಹುದ್ದೆಗೆ ನೇಮಕಕ್ಕೆ ಯಾವ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂಬ ಬಗ್ಗೆ ತಿಳಿಸಬೇಕು ಎಂದಿದಾರೆ.
ಪಂಜಾಬ್ನಲ್ಲಿ ಮೂರು ಕೋಟಿ ಮಂದಿ ವಾಸಿಸುತ್ತಿದ್ದಾರೆ. ಅವರೆಲ್ಲರ ಜವಾಬ್ದಾರಿ ನನ್ನ ಮೇಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನರೇ ಸರ್ವೋಚ್ಚ. ಜನರು ಆಯ್ಕೆ ಮಾಡಿ ಕಳುಹಿಸಿದ ಸರ್ಕಾರ ನಮ್ಮದು. ಅವರಿಂದ ಚುನಾಯಿತರಾದವರು ಅವರ ಏಳಿಗೆಗೆ ನಿರ್ಧಾರ ಕೈಗೊಳ್ಳಬೇಕೇ ಹೊರತು ಆಯ್ಕೆಯಾಗಿ ಬಂದವರಲ್ಲ ಎಂದು ವಾಗ್ದಾಳಿ ನಡೆಸಿದರು.