ಧಾರವಾಡ, ಫೆ 15 (DaijiworldNews/DB): ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಪರವಾಗಿ ಜೆಡಿಎಸ್ ಕೆಲಸ ಮಾಡಿದೆಯೇ ಹೊರತು ಬಿಜೆಪಿಯಂತೆ ಅಮಾಯಕರನ್ನು ಬಲಿ ಪಡೆದುಕೊಂಡು ರಾಜಕೀಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿರುವುದಲ್ಲದೆ, ಜನರ ಕಷ್ಟಗಳಿಗೆ ಪ್ರಾಮಾಣಿಕ ಸ್ಪಂದನೆ ನೀಡಿದ್ದೇವೆ. ಬಿಜೆಪಿಯವರು ಅಮಾಯಕರನ್ನು ಬಲಿ ಪಡೆದುಕೊಂಡು ರಾಜಕೀಯ ಮಾಡುತ್ತಾರೆಯೇ ಹೊರತು ಅವರು ಅಭಿವೃದ್ದಿ ಬೇಕಾಗಿಲ್ಲ ಎಂದರು.
ಚುನಾವಣೆ ಬಂದಾಗ ರಾಜ್ಯಕ್ಕೆ ಬಂದು ಅಮಿತ್ ಶಾ ಭಾಷಣ ಮಾಡುತ್ತಾರೆ. ಆದರೆ ಅವರು ಇಲ್ಲಿನ ಜನರಿಗೆ ಏನು ಕೊಡುಗೆ ನೀಡಿದ್ದಾರೆ? ಮಹದಾಯಿ ಸಮಸ್ಯೆ ಸರಿಪಡಿಸಿದ್ದಾರಾ? ಎಂದು ಪ್ರಶ್ನಿಸಿದ ಎಚ್ಡಿಕೆ, ರಾಜ್ಯ ಮತ್ತು ದೇಶದಲ್ಲಿ ಜನರ ತೀರ್ಮಾನವೇ ಅಂತಿಮ. ಜನರ ಆಶೀರ್ವಾದವಿದ್ದವರು ಜನಪ್ರತಿನಿಧಿಗಳಾಗುತ್ತಾರೆ ಎಂದು ತಿಳಿಸಿದರು.
ಜನರು ನಮ್ಮನ್ನು ಸ್ವೀಕರಿಸಿದ ಕಾರಣಕ್ಕಾಗಿಯೇ ನಾವು ಜನಪ್ರತಿನಿಧಿಗಳಾಗಿದ್ದೇವೆ. ಹಿಂಬಾಗಿಲಿನಲ್ಲಿ ಪ್ರವೇಶಿಸಿ ಜನಪ್ರತಿನಿಧಿ ಆಗಿರುವುದಲ್ಲ. ಹಾಗಂದ ಮೇಲೆ ಬಿಜೆಪಿಯವರಿಂದ ಪರ್ಮಿಷನ್ ತೆಗೆದುಕೊಳ್ಳುವ ಅಗತ್ಯ ನಮಗಿಲ್ಲ ಎಂದರು.