ಭೋಪಾಲ್, ಫೆ 15 (DaijiworldNews/DB): ಸಮಾಜಕ್ಕೆ ಹೆದರಿ ಅವಿವಾಹಿತ ಅತ್ಯಾಚಾರ ಸಂತ್ರಸ್ತೆಯೊಬ್ಬಳು ತನ್ನ ನವಜಾತ ಶಿಶುವನ್ನು ಕೊಂದ ಘಟನೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಝಬುವಾ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ವರ್ಷ ಅಪರಿಚಿತನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಯುವತಿ ನಾಲ್ಕು ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಸಮಾಜಕ್ಕೆ ಹೆದರಿ ಆ ಶಿಶುವನ್ನು ಹತ್ಯೆಗೈದು ಸಮಾಧಿ ಮಾಡಿದ್ದಾಳೆ. ಘಟನೆ ಸಂಬಂಧ ಆರೋಪಿ ಯುವತಿ, ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
ಯುವತಿ ಗರ್ಭಿಣಿಯಾಗಿದ್ದನ್ನು ತಿಳಿದುಕೊಂಡಿದ್ದ ಪೊಲೀಸರು ಮಗು ಜನಿಸುವಾಗ ಮಾಹಿತಿ ನೀಡುವಂತೆ ಕುಟುಂಬಕ್ಕೆ ಹೇಳಿದ್ದರು. ಆದರೆ ಮಗು ಜನಿಸಿದ ಕೂಡಲೇ ಅದನ್ನು ಕಾಲಿನಿಂದ ಕುತ್ತಿಗೆ ಹಿಸುಕಿ ಕೊಂದಿದ್ದಾಳೆ. ಶಿಶುವಿನ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದಾಗ ಕ್ರೂರವಾಗಿ ಅದನ್ನು ಹತ್ಯೆ ಮಾಡಿರುವುದು ದೃಢಪಟ್ಟಿದೆ. ಅಲ್ಲದೆ ಬೆನ್ನುಮೂಳೆಯ ಮೇಲ್ಭಾಗದಲ್ಲಿ ಹಲವು ಮುರಿತಗಳಾಗಿರುವುದೂ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಮೂವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.