ಬೆಂಗಳೂರು, ಫೆ 15 (DaijiworldNews/MS): ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು. ತಲೆ ತಿರುಕರು ಹೀಗೆ ಮಾತಾಡೋದು. ತಲೆ ಸರಿ ಇದ್ದವರು ಯಾರೂ ಕೂಡ ಈ ರೀತಿ ಮಾತಾಡಲ್ಲ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ವಿಚಾರವಾಗಿ ತಿರುಗೇಟು ನೀಡಿ ಮಾತನಾಡಿದ ಅವರು, ಬಾಯಿಗೆ ಬಂದಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತಾಡ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದನ್ನು ಸದನದಲ್ಲಿ ಅವರು ಮಾತಾಡಲಿ. ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ ಎಂದು ಸವಾಲ್ ಎಸೆದರು.
ಹಿಂದೆ ಶೇ40 ಲಂಚದ ಆರೋಪ ಮಾಡಿದರು. ಅದಕ್ಕೆ ಒಂದೇ ಒಂದು ದಾಖಲೆ ಕೊಡಲಿಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಆರೋಪ ಸಾಬೀತು ಮಾಡಲಿಲ್ಲ. ನೀರಾವರಿ ಟೆಂಡರ್ ನಲ್ಲಿ ಅಕ್ರಮ ಆಗಿದ್ದರೆ ದಾಖಲೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವುದು ಸರಿಯಲ್ಲ ಎಂದಿ ಹೇಳಿದರು.