ನವದೆಹಲಿ, ಫೆ. 15 (DaijiworldNews/SM): ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರಲು ಚಿಂತನೆ ಇದ್ದು, ರಾಜ್ಯಗಳು ಒಪ್ಪಿದ್ದಲ್ಲಿ ಇದನ್ನು ಜಾರಿಗೊಳಿಸಲಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ನಂತರದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ, ವಿಮಾನ ಇಂಧನ ಜಿಎಸ್ಟಿ ವ್ಯಾಪ್ತಿಯಲ್ಲಿ ಇಲ್ಲ. ಇವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ಯಾವತ್ತಿನಿಂದ ತರಬೇಕು ಎಂಬ ತೀರ್ಮಾನ ಕೈಗೊಳ್ಳುವ ಅಧಿಕಾರ ಜಿಎಸ್ಟಿ ಮಂಡಳಿಗೆ ಇದೆ. ರಾಜ್ಯಗಳು ಒಪ್ಪಿಕೊಂಡ ನಂತರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಕೂಡ ಜಿಎಸ್ಟಿ ವ್ಯಾಪ್ತಿಗೆ ಬರುತ್ತವೆ’ ಎಂದು ಹೇಳಿದ್ದಾರೆ.
ರಾಜ್ಯಗಳು ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರವು "ಎಲ್ಲಾ ಸಮಯದಲ್ಲೂ ಸಿದ್ಧವಾಗಿದೆ" ಎಂಬ ಪುರಿ ಅವರ ನವೆಂಬರ್ 2022 ರ ಪ್ರತಿಪಾದನೆಯನ್ನು ವಿತ್ತ ಸಚಿವರ ಹಾಲಿ ಹೇಳಿಕೆಯು ಪ್ರತಿಧ್ವನಿಸುತ್ತದೆ. ಆದರೆ ಅಂತಹ ನಿರ್ಧಾರವನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ಆಡಳಿತವು ಯಾವುದೇ ಸೂಚನೆಯನ್ನು ನೀಡಿಲ್ಲ.