ನವದಹಲಿ, ಫೆ 16 (DaijiworldNews/DB): ನಮ್ಮ ಮಗಳನ್ನು ಹತ್ಯೆಗೈದವನನ್ನು ನೇಣಿಗೆ ಏರಿಸಬೇಕು ಎಂದು ದೆಹಲಿಯಲ್ಲಿ ಸಹ ಜೀವನ ಸಂಗಾತಿಯಿಂದಲೇ ಹತ್ಯೆಗೀಡಾದ ಯುವತಿ ನಿಕ್ಕಿ ಯಾದವ್ ಪೋಷಕರು ಆಗ್ರಹಿಸಿದ್ದಾರೆ.
ನಿಕ್ಕಿ ಯಾದವ್ ತನ್ನ ಸ್ನೇಹಿತ ಸಾಹಿಲ್ ಗೆಹಲೋತ್ ಎಂಬಾತ ಆಕೆಯ ಕುತ್ತಿಗೆ ಬಿಗಿದು ಹತ್ಯೆ ಮಾಡಿ ತನ್ನದೇ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ ಪ್ರಕರಣ ಸಂಬಂಧ ನಿಕ್ಕಿ ಪೋಷಕರು ಮಾತನಾಡಿ, ಮಗಳು ಹೋಗಿ ಬಿಟ್ಟಳು. ಇನ್ನವಳು ನಮಗೆ ಸಿಗುವುದಿಲ್ಲ. ಆದರೆ ನಮ್ಮ ಮಗಳಿಗೆ ಆದ ಅನ್ಯಾಯಕ್ಕೆ ಸರಿಯಾದ ಶಿಕ್ಷೆ ಆರೋಪಿಗೆ ಸಿಗಬೇಕು. ನಮಗೆ ನ್ಯಾಯ ಸಿಗಬೇಕಾದರೆ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆತನನ್ನು ಗಲ್ಲಿಗೇರಿಸಿ ನಮಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ನಿಕ್ಕಿ ಯಾದವ್ ಸ್ನೇಹಿತ ಸಾಹಿಲ್ ಬೇರೊಬ್ಬ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದನ್ನು ಪ್ರಶ್ನಿಸಿದಕ್ಕೆ ಆತ ನಿಕ್ಕಿ ಯಾದವ್ಳ ಕುತ್ತಿಗೆಯನ್ನು ಡೇಟಾ ಕೇಬಲ್ನಲ್ಲಿ ಬಿಗಿದು ಹತ್ಯೆಗೈದಿದ್ದ. ಬಳಿಕ ಶವವನ್ನು ನೈರುತ್ಯ ದೆಹಲಿಯಲ್ಲಿರುವ ತನ್ನದೇ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ. ಕೊಲೆಯಾದ ನಾಲ್ಕು ದಿನಗಳ ಬಳಿಕ ಮೃತದೇಹವನ್ನು ಹೊರ ತೆಗೆಯಲಾಗಿತ್ತು. ಸದ್ಯ ಆರೋಪಿ ಪೊಲೀಸರ ಬಂಧನದಲ್ಲಿದ್ದಾನೆ.