ಬೆಂಗಳೂರು,ಫೆ 16 (DaijiworldNews/MS): ಹಾಲಿ ಸರ್ಕಾರದ ಕೊನೆಯ ಬಜೆಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ನಾಳೆ (ಫೆ.17ಕ್ಕೆ) ಮಂಡಿಸಲಿದ್ದಾರೆ.
ಇದು ಬೊಮ್ಮಾಯಿ ಮಂಡಿಸುವ ೨ನೇ ಬಜೆಟ್ ಆಗಿದ್ದು, ಚುನಾವಣ ವರ್ಷವಾದುದರಿಂದ ಜನಪ್ರಿಯ, ಯಾವುದೇ ತೆರಿಗೆ ಹೊರೆ ಇಲ್ಲದ , ಎಲ್ಲಾ ಸಮುದಾಯವನ್ನು ತೃಪ್ತಿ ಪಡಿಸುವಂತಹ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ನಾಳೆ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಬಜೆಟ್ ಪೂರ್ವತಯಾರಿ ಸಭೆಗಳನ್ನು ನಡೆಸಿರುವ ಸಿಎಂ, ಇದೀಗ ಅಂತಿಮ ಟಚ್ ನೀಡುತ್ತಿದ್ದಾರೆ.
2022-23 ರ ಸಾಲಿನಲ್ಲಿ 2.7 ಲಕ್ಷ ಕೋಟಿ ಆಯವ್ಯಯ ಮಂಡಿಸಿದ್ದ ಬೊಮ್ಮಾಯಿ ಈ ಬಾರಿ 3 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಮುಂದಿನ ಚುನಾವಣೆಯಲ್ಲಿ ಅನುಕೂಲವಾಗುವಂತೆ ಜನಪ್ರಿಯ ಘೋಷಣೆಗಳೊಂದಿಗೆ ಬಜೆಟ್ ಮಂಡಿಸುವುದು ಬಹುತೇಕ ಖಚಿತವಾಗಿದೆ.