ನವದಹಲಿ, ಫೆ 16 (DaijiworldNews/DB): ಲೆಫ್ಟಿನೆಂಟ್ ಜನರಲ್ ಎಂ.ವಿ. ಸುಚೇಂದ್ರ ಕುಮಾರ್ ಅವರನ್ನು ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
2022ರ ಜುಲೈನಿಂದ ಸೇನಾ ಸಿಬ್ಬಂದಿ (ಕಾರ್ಯತಂತ್ರ) ವಿಭಾಗದ ಉಪಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಚೇಂದ್ರಕುಮಾರ್ ಅವರು ಸೇನೆಯ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವಿಯಾಗಿದ್ದಾರೆ. ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿದ್ದಾರೆ.
ಇಲ್ಲಿವರೆಗೆ ಸೇನೆಯ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರನ್ನು ಸೇನೆಯ ನೈಋತ್ಯ ವಲಯದ ಕಮಾಂಡರ್ ಆಗಿ ನಿಯೋಜನೆ ಮಾಡಲಾಗಿದೆ. ಸೇನೆಯ ನೈಋತ್ಯ ವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಎಸ್.ಭಿಂದರ್ ಅವರು ಫೆಬ್ರವರಿ 28ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬಿ. ಎಸ್. ರಾಜು ನೇಮಕಗೊಂಡಿದ್ದಾರೆ.
ಬಿ.ಎಸ್. ರಾಜು ಅವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದವರು. ಸೇನಾ ಉಪಮುಖ್ಯಸ್ಥರಾಗಿ 2022ರ ಮೇಯಲ್ಲಿ ನೇಮಕಗೊಂಡಿದ್ದರು.