ಗುವಾಹಟಿ, ಫೆ 16 (DaijiworldNews/DB): ಅಸ್ಸಾಂ ಸರ್ಕಾರವು ಬಾಲ್ಯವಿವಾಹವಾದವರನ್ನು ಸಾಕಷ್ಟು ಸಂಖ್ಯೆಯಲ್ಲಿ ಬಂಧಿಸುತ್ತಿರುವುದರ ವಿರುದ್ದ ಗುವಾಹಟಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಈ ಕ್ರಮದಿಂದ ಜನರ ಖಾಸಗಿ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಲ್ಯ ವಿವಾಹದ ವಿರುದ್ದ ಅಸ್ಸಾಂ ಸರ್ಕಾರ ಕಠಿಣ ಕ್ರಮ ರೂಪಿಸಿದ್ದು, ಬಾಲ್ಯವಿವಾಹವಾದ ಪುರುಷರನ್ನು ಸಾಕಷ್ಟು ಸಂಖ್ಯೆಯಲ್ಲಿ ಬಂಧಿಸಿದೆ. ಇದೀಗ ಆರೋಪಿಗಳು ಜಾಮೀನು ಅರ್ಜಿ ಮತ್ತು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಮನ್ ಶ್ಯಾಮ್ ಅವರು ಜಾಮೀನಿನ ಮೇಲೆ ಎಲ್ಲಾ ಅರ್ಜಿದಾರರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದರು. ಅಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಈ ವಿಚಾರವಾಗಿ ಬಂಧಿಸುತ್ತಿರುವುದು ಜನರ ಖಾಸಗಿ ಜೀವನದ ಮೇಲೆ ಪರಿಣಾಮ ಬೀರಲು ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲ್ಯ ವಿವಾಹದ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ- 2012 (ಪೋಕ್ಸೊ) ಅಡಿ ಮೊಕದ್ದಮೆ ಮತ್ತು ಅತ್ಯಾಚಾರ ವಿರುದ್ಧದ ಮೊಕದ್ದಮೆ ದಾಖಲಿಸುವ ನಿಯಮದ ಕುರಿತೂ ಇದೇ ವೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದು ಅಸಂಬದ್ದ ಕ್ರಮವಾಗಿದೆ. ವಯೋವೃದ್ದರು, ಕುಟುಂಬ ಹೊಣೆ ಹೊತ್ತವರೂ ಬಂಧಿಸಲ್ಪಟ್ಟವರಲ್ಲಿದ್ದಾರೆ ಎಂದು ಹೇಳಿದೆ